ಬಿಡುಗಡೆ ಮುನ್ನ ಟಿವಿಯಲ್ಲಿ ವಿಜಯ್ ಚಿತ್ರ ಪ್ರಸಾರ!

ತಮಿಳು ನಟ ವಿಜಯ್ ಅವರ ಕೊನೆಯ ಚಿತ್ರ ಎಂದೇ ಹೇಳಲಾಗುತ್ತಿದ್ದ ‘ಜನನಾಯಗನ್’ ಲೀಕ್ ಆದ ಬೆನ್ನಲ್ಲೇ ನೇರವಾಗಿ ಟಿವಿಯಲ್ಲೇ ಪ್ರದರ್ಶನ ಮಾಡಿದ ಘಟನೆ ನಡೆದಿದೆ.

ಏಪ್ರಿಲ್ 11 ರಂದು ಕೊಯಮತ್ತೂರಿನಲ್ಲಿ ಸ್ಥಳೀಯ ಕೇಬಲ್ ಟಿವಿ ಚಾನೆಲ್ ಸೋರಿಕೆಯಾದ ಚಿತ್ರವನ್ನು ಅಕ್ರಮವಾಗಿ ಪ್ರಸಾರ ಮಾಡಿದೆ. ಇದು ಚಿತ್ರತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಚಿತ್ರದ ಪೂರ್ಣ ಎಚ್ ಡಿ ಮುದ್ರಣ ಏಪ್ರಿಲ್ 9 ರಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ನಂತರ ಕೊಯಮತ್ತೂರಿನ ಸ್ಥಳೀಯ ಕೇಬಲ್ ಟಿವಿ ಚಾನೆಲ್ ನಲ್ಲಿ ಇಡೀ ಚಿತ್ರವನ್ನೇ ಪ್ರಸಾರ ಮಾಡಲಾಗಿದೆ. ಈ ಘಟನೆ ತಮಿಳು ಚಲನಚಿತ್ರೋದ್ಯಮ ಮತ್ತು ವಿಜಯ್ ಅವರ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ.

ಖಾಸಗಿ ಸ್ಥಳೀಯ ದೂರದರ್ಶನ ಚಾನೆಲ್ ರಾಶಿ ಪ್ರೈಮ್ ಮೂವಿಯಲ್ಲಿ ಅಕ್ರಮವಾಗಿ ಚಿತ್ರ ಪ್ರಸಾರ ಮಾಡಿದ ನಂತರ ಟಿವಿಕೆ ಬೆಂಬಲಿಗರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕೊಯಮತ್ತೂರು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದ್ದಾರೆ. ಅಲ್ಲದೇ ಕೇಬಲ್ ಟಿವಿ ಚಾನಲ್ ಮಾಲೀಕ ಎಸ್ ಪಳನಿಸಾಮಿ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಹಲವು ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಪ್ರಸಾರದಲ್ಲಿ ಬಳಸಲಾದ ಕಂಪ್ಯೂಟರ್, ಐದು ಹಾರ್ಡ್ ಡಿಸ್ಕ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇಬಲ್ ಚಾನೆಲ್‌ನ ಕಚೇರಿಯನ್ನು ಮೊಹರು ಮಾಡಲಾಗಿದೆ. ಆರೋಪಿ ಎಸ್ ಪಳನಿಸಾಮಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯ್ ಅವರ ಕೊನೆಯ ಚಿತ್ರ ಜನನಾಯಗನ್ ಸುಮಾರು 500 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಸೆನ್ಸಾರ್ ಗೊಂದಲದಿಂದಾಗಿ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ

Be the first to comment

Leave a Reply

Your email address will not be published. Required fields are marked *

Translate »
error: Content is protected !!