ಸೆಪ್ಟೆಂಬರ್ 4ರಿಂದ 6ರವರೆಗೆ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಅಮೆರಿಕದ ಫಿಲಡೆಲ್ಫಿಯಾದಲ್ಲಿ ಹಮ್ಮಿಕೊಂಡಿರುವ ರಜತ ಮಹೋತ್ಸವ ಸಮಾರಂಭಕ್ಕೆ ನಟ ರಿಷಬ್ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸಿದೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಕನ್ನಡ ನಾಡು–ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾಣಿಜ್ಯ ಹಾಗೂ ಉದ್ಯಮಿಗಳ ಸಮ್ಮೇಳನ, ಕನ್ನಡ ಚಲನಚಿತ್ರ ಹಾಗೂ ನಾಟಕಗಳ ಪ್ರದರ್ಶನ ಸೇರಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಮೆರಿಕ ಹಾಗೂ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಕನ್ನಡಾಭಿಮಾನಿಗಳು ಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಜತ ಮಹೋತ್ಸವ ಸಂಭ್ರಮ ವಿಶ್ವದ ಕನ್ನಡಿಗರ ಏಕತೆಯ ಪ್ರತೀಕವಾಗಿದೆ.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಆಳವಾದ ಪ್ರೀತಿ , ಅವರ ವಿಶಿಷ್ಟ ಕಲಾತ್ಮಕ ದೃಷ್ಟಿಕೋನದ ಮೂಲಕ ರಿಷಬ್ ಶೆಟ್ಟಿ ಅವರು ಕನ್ನಡದ ಹೆಮ್ಮೆಯನ್ನು ಜಾಗತಿಕವಾಗಿ ಹೆಚ್ಚಿಸಿದ್ದಾರೆ. ಅವರು ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ರಿಷಬ್ ಶೆಟ್ಟಿ ಅವರ ಉಪಸ್ಥಿತಿ ಈ ಸಮ್ಮೇಳನಕ್ಕೆ ಇನ್ನಷ್ಟು ಭವ್ಯತೆ, ಗೌರವ ಮತ್ತು ಅಂತರರಾಷ್ಟ್ರೀಯ ಮೆರುಗು ನೀಡಲಿದೆ ಎಂದು ಅಕ್ಕ ಹೇಳಿದೆ.





Be the first to comment