‘ಕೆಡಿ: ದ ಡೆವಿಲ್’ ಚಿತ್ರದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನಿಂದ ನೋವಾಗಿದ್ದರೆ ನಾನು ಮತ್ತೆ ಆ ಹಾಡನ್ನು ರಿರೈಟ್ ಮಾಡ್ತೀನಿ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.
ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ಹಿಂದಿ ಆವೃತ್ತಿಯ ಹಾಡನ್ನು ನಿರ್ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಈ ಹಾಡಿನ ಕುರಿತು ಸೆನ್ಸಾರ್ ಮಂಡಳಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ. ಹಾಡಿನಲ್ಲಿ ಕಾಣಿಸಿಕೊಂಡಿರುವ ನಟಿ ನೋರಾ ಫತೇಹಿ ಮತ್ತು ಹಿಂದಿ ಸಾಹಿತಿ ರಕೀಬ್ ಆಲಂ ವಿರುದ್ಧವೂ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರೂ ಪ್ರೇಮ್ ರತ್ತ ಬೊಟ್ಟು ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರೇಮ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
”ಯಾರಿಗೂ ನೋವು ಮಾಡುವ ಉದ್ದೇಶದಿಂದ ಈ ಹಾಡು ಬರೆದಿಲ್ಲ. ಈ ಹಾಡನ್ನು ನಾನು ಒಂದು ಬಾಟಲ್, ಒಂದು ಉಪ್ಪಿನಕಾಯಿ ಕಟೆಂಟ್ ಇಟ್ಕೊಂಡು ಬರೆದೆ. ಬಾಟಲ್ ನ ಮೇಲೆ ಎತ್ತಿ ಎನ್ನುವ ಪದವನ್ನು ಹಿಂದೆ ಹಾಕಬಹುದಿತ್ತು. ಆದ್ರೆ ನಾನು ಕುತೂಹಲ ಇರಲಿ ಎಂದು ಆ ಪದವನ್ನು ಕೊನೆಯಲ್ಲಿ ಹಾಕಿದೆ. ಹಾಡನ್ನು ಅಶ್ಲೀಲವಾಗಿಯಾಗಲಿ, ತೊಂದರೆ ನೀಡಲಾಗಲಿ ಬರೆಯಲಿಲ್ಲ. ಕೆಲವರು ಲೈಕ್ ಮತ್ತು ಕಮೆಂಟ್ ಗಳಾಗಿ ತಮ್ಮನ್ನು ನಿಂದಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
”ಹಾಡಿನಿಂದ ನೋವಾಗಿದ್ದರೆ ನಾನು ಮತ್ತೆ ಆ ಹಾಡನ್ನು ಪುನಃ ಬರೆಯುತ್ತೇನೆ. ಮತ್ತೆ ದೇಶಾದ್ಯಂತ ರಿಲೀಸ್ ಮಾಡ್ತೇನೆ. ಹಿಂದಿ ಹಾಡು ಬರೆದಿದ್ದು ರಕೀಬ್ ಆಲಂ ಅವರು. ರಕೀಬ್ ಅವರು ಕನ್ನಡವನ್ನೇ ಅನುವಾದ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ. ವಿವಾದದಿಂದಾಗಿ ಅವರು ಆ ರೀತಿ ಹೇಳಿರಬಹುದು. ನೋರಾ ಫತೇಹಿ ಅವರ ಹೇಳಿಕೆ ತಪ್ಪು. ಯಾರೇ ನಟರಾಗಲಿ ಚಿತ್ರೀಕರಣಕ್ಕಿಂತ ಮೊದಲು ಹಾಡು ಕೇಳುತ್ತಾರೆ. ಸಾಹಿತ್ಯ ಬರದೇ ಅವರು ಹೇಗೆ ಎಕ್ಸ್ ಪ್ರೆಷನ್ ನೀಡಲು ಸಾಧ್ಯ? ಅವರೇಕೆ ಆ ರೀತಿ ಮಾತನಾಡಿದರೋ ಗೊತ್ತಿಲ್ಲ. ವಿವಾದವಾಗುತ್ತಿದೆ ಅದರಿಂದ ತಪ್ಪಿಸಿಕೊಳ್ಳಬೇಕು ಎಂದು ಬಹುಶಃ ಅವರು ಆ ರೀತಿ ಹೇಳಿಕೆ ನೀಡಿರಬಹುದು. ಆದರೆ ಮೊನ್ನೆ ಹಾಡು ಬಿಡುಗಡೆ ವೇಳೆಯೂ ನೋರಾ ಅವರು ಹಾಡಿನ ಬಗ್ಗೆ ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದರು” ಎಂದು ಹೇಳಿದ್ದಾರೆ.





Be the first to comment