ತಮಿಳು ನಟಿ ಅಂಜು ಕೃಷ್ಣ ಸೇರಿ ಒಟ್ಟು ಎಂಟು ಮಂದಿಯನ್ನು ಡ್ರಗ್ಸ್ ಪ್ರಕರಣದಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಅಂಜು ಕೃಷ್ಣ, ತಮಿಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿನ್ಸಿ ನಿವೇತಾ ಅವರನ್ನು ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗ ಡ್ರಗ್ಸ್ ಸಮೇತ ಬಂಧಿಸಿದೆ. ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರವಕ್ಕಂ ಪ್ರದೇಶದ ವಿಘ್ನೇಶ್ವರನ್ ಎಂಬಾತನನ್ನು ಪೊಲೀಸರು ಮೊದಲಿಗೆ ಬಂಧಿಸಿದ್ದರು. ವಿಚಾರಣೆ ವೇಳೆ ಆತ ವೆಂಕಟೇಶ್ ಎಂಬ ವ್ಯಕ್ತಿಯಿಂದ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದದನ್ನು ಒಪ್ಪಿಕೊಂಡ. ಆತನ ಮಾಹಿತಿ ಆಧರಿಸಿ ಪೊಲೀಸರು ಗ್ರಾಹಕರಂತೆ ನಟನೆ ಮಾಡಿ ವೆಂಕಟೇಶ್ ನ್ನು ಸಂಪರ್ಕಿಸಿ ಡ್ರಗ್ಸ್ ಪೂರೈಕೆಗಾಗಿ ನಿಗದಿತ ಸ್ಥಳಕ್ಕೆ ಕರೆಸಿಕೊಂಡರು.
ಆತ ಸ್ಥಳಕ್ಕೆ ಬಂದಾಗ ಆತನಿಂದ ಮೆಥಾಫೆಟಮೈನ್, ಓಜಿ ಗಾಂಜಾ, ಸಾಮಾನ್ಯ ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಮಾಹಿತಿಯ ಮೇರೆಗೆ ಪೊಲೀಸರು ಇತರ ಆರೋಪಿಗಳನ್ನು ಬಂಧಿಸಿದ್ದು, ಈ ವೇಳೆ ಅಂಜು ಕೃಷ್ಣ, ವಿನ್ಸಿ ನಿವೇತಾ ಸಿಕ್ಕಿಬಿದ್ದಿದ್ದಾರೆ.
ಅಂಜು ಕೃಷ್ಣ ತಮಿಳಿನ ‘ವೆಲ್ಲಿಮಲೈ’ ಹಾಗೂ ಮಲಯಾಳಂನ ‘ಆರೊ’, ‘ಆಕಾಶಂ ಕದನ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಸ್ತುತ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
—–





Be the first to comment