ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರತಂಡ, ಚಿತ್ರ ಬಿಡುಗಡೆಗೆ ನ್ಯಾಯಾಲಯದಲ್ಲಿ ಪ್ರಕರಣ ತಡವಾಗುವ ಕಾರಣ ರಾಜಕೀಯ ಸಂಬಂಧಿಸಿದ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ.
‘ಜನ ನಾಯಗನ್’ ರೀಮೇಕ್ ಸಿನಿಮಾ ಆಗಿದ್ದರೂ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರವನ್ನು ಸಿಬಿಎಫ್ಸಿ ನಿರಾಕರಿಸಿ ಚಿತ್ರತಂಡ ನ್ಯಾಯಾಲಯದ ಮೆಟ್ಟಿಲೇರಿದೆ. ಆದರೆ ನ್ಯಾಯಾಲಯದಲ್ಲಿ ಚಿತ್ರತಂಡಕ್ಕೆ ನ್ಯಾಯ ವಿಳಂಬ ಆಗುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಹ ಸನಿಹದಲ್ಲೇ ಇದ್ದು, ಚುನಾವಣೆ ಘೋಷಣೆ ಆದರೆ ಸಿನಿಮಾ ಬಿಡುಗಡೆ ಎರಡು ತಿಂಗಳು ಮುಂದೂಡ ಬೇಕಾಗುತ್ತದೆ. ಇದೀಗ ಚಿತ್ರತಂಡ 20 ನಿಮಿಷಗಳ ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿದೆ ಎನ್ನಲಾಗುತ್ತಿದೆ.
ಸಿನಿಮಾನಲ್ಲಿರುವ ರಾಜಕೀಯ ಅಂಶಗಳಿಂದ ಸಿನಿಮಾ ವಿವಾದಕ್ಕೆ ಸಿಲುಕಿದೆ. ವಿವಾದಕ್ಕೆ ಕಾರಣವಾದ ಎಲ್ಲ ದೃಶ್ಯಗಳು, ಸಂಭಾಷಣೆಗಳನ್ನು ತೆಗೆದು ಹಾಕಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಇದರಿಂದ, ನ್ಯಾಯಾಲಯದ ವಿಚಾರಣೆ ಇಲ್ಲದೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲಿದ್ದು, ಸಿನಿಮಾ ಬಿಡುಗಡೆಗೆ ಸಮಸ್ಯೆ ಆಗುವುದಿಲ್ಲ.
ವಿಜಯ್ ‘ಜನ ನಾಯಗನ್’ ಸಿನಿಮಾವನ್ನು ತಮ್ಮ ಪಕ್ಷದ ಪ್ರಚಾರಕ್ಕೆ ಬಳಸುವ ಯೋಜನೆ ಹಾಕಿಕೊಂಡಿದ್ದರು. ಆದರೆ ಸಿನಿಮಾದ ಬಿಡುಗಡೆ ಇಕ್ಕಟ್ಟಿಗೆ ಸಿಲುಕಿದೆ. ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಮ್’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ.
‘ಜನ ನಾಯಗನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ, ಮಲಯಾಳಂ ಸ್ಟಾರ್ ನಟಿ ಮಮಿತಾ ಬಿಜು ನಟಿಸಿದ್ದಾರೆ.
——





Be the first to comment