ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೀವನ ಮತ್ತು ಸಾಧನೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗುತ್ತಿದೆ.
ಬಾಲನಟನಿಂದ ಲೋಕೋಪಕಾರಿ ಮತ್ತು ಮೌಲ್ಯಗಳಿಗೆ ಹೆಸರುವಾಸಿಯಾದ ಪುನೀತ್ ಅವರ ಬದುಕಿನ ಪಯಣ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವ ರೀತಿ ಇದ್ದು ಅದನ್ನು ಪಠ್ಯಪುಸ್ತಕದಲ್ಲಿ ಸೇರಿಸಿದರೆ ಉತ್ತಮ ಎಂಬ ನಿರ್ಧಾರಕ್ಕೆ ಪಠ್ಯಪುಸ್ತಕ ಸೊಸೈಟಿ ಬಂದಿದೆ.
ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಮನ್ನಣೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ‘ಇದು ನಟನಾ ವೃತ್ತಿಜೀವನವನ್ನು ಮೀರಿ ಪುನೀತ್ ಅವರು ಯಾವ ರೀತಿಯ ವ್ಯಕ್ತಿ ಎಂದು ಮಕ್ಕಳು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಗೌರವ ನನಗೆ ನಿಜಕ್ಕೂ ಸಂತೋಷ ಮತ್ತು ಹರ್ಷವಾಗಿದೆ. ನನ್ನ ಪತಿ ಮತ್ತು ನನ್ನ ಕುಟುಂಬಕ್ಕೆ ಈ ವಿಶಿಷ್ಟ ಗೌರವಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಜೀವನವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸುವ ಪ್ರಸ್ತಾಪವು 2022ರಲ್ಲಿ ಬಂದಿತ್ತು. ಆಗ ಟಿ ನರಸೀಪುರದ ಅಭಿಮಾನಿಯೊಬ್ಬರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಪ್ರಸ್ತಾವನೆಯನ್ನು ಶಾಲಾ ಶಿಕ್ಷಣ ಇಲಾಖೆ ಸಚಿವರ ಮುಂದಿಟ್ಟರು.
ಅಕಾಲಿಕ ಮರಣ ಹೊಂದಿದ ಪುನೀತ್ ರಾಜ್ ಕುಮಾರ್ 26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು, 19 ಗೋಶಾಲೆಗಳು ಮತ್ತು ಹೆಚ್ಚು ಹಿಂದುಳಿದ ಮಕ್ಕಳಿಗೆ ಆರ್ಥಿಕ ನೆರವು ಸೇರಿದಂತೆ ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದ್ದರು.
ಡಾ. ರಾಜ್ಕುಮಾರ್ ಅವರ ಜೀವನ ಮತ್ತು ಕೊಡುಗೆಗಳ ಬಗ್ಗೆ 6ನೇ ತರಗತಿಯ ಪ್ರಥಮ ಭಾಷೆಯ ಕನ್ನಡ ಪಠ್ಯಪುಸ್ತಕದಲ್ಲಿ ಈಗಾಗಲೇ ಪಾಠವಿದೆ. ಇದೀಗ ಪುತ್ರ ಪುನೀತ್ ರಾಜ್ ಕುಮಾರ್ ಕುರಿತ ಪಠ್ಯವನ್ನು ಸೇರಿಸಲಾಗುತ್ತಿದ್ದು, ಯಾವ ತರಗತಿಯಲ್ಲಿ ಎಂಬುದು ನಿರ್ಧಾರವಾಗಿಲ್ಲ.
—–





Be the first to comment