ಮಲಯಾಳಂ ಮೂಲದ ನಟಿಯೊಬ್ಬರ ಮೇಲೆ ನಡೆದ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳ ನ್ಯಾಯಾಲಯ ಆರೋಪಿಗಳಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಆದೇಶಿಸಿದೆ.
ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ. ಡಿಸೆಂಬರ್ 8ರಂದು ತೀರ್ಪು ಪ್ರಕಟಿಸಿದ್ದ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಹನಿ ಎಂ. ವರ್ಗೀಸ್ ಅವರು ಆರೋಪಿಗಳಾದ ಸುನಿಲ್ ಎನ್.ಎಸ್. ಅಲಿಯಾಸ್ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಬಿ. ಮಣಿಕಂಠನ್, ವಿ.ಪಿ. ವಿಜೀಶ್, ಎಚ್. ಸಲೀಂ ಅಲಿಯಾಸ್ ವಡಿವಲ್ ಸಲೀಂ ಹಾಗೂ ಪ್ರದೀಪ್ ಅವರನ್ನು ಸಾಮೂಹಿಕ ಅತ್ಯಾಚಾರ ಸೇರಿದಂತೆ ವಿವಿಧ ಆರೋಪಗಳಲ್ಲಿ ದೋಷಿಗಳೆಂದು ಪರಿಗಣಿಸಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿಗಳಿಗೆ ತಲಾ 20 ಸಾವಿರ ರೂ. ದಂಡ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದಲ್ಲಿ ಇನ್ನೂ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಆದೇಶಿಸಿದೆ.
ದಂಡದ ಮೊತ್ತದಿಂದ ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ ನೀಡಲು ಸೂಚಿಸಲಾಗಿದೆ. ಪಲ್ಸರ್ ಸುನಿಗೆ ಐಟಿ ಕಾಯ್ದೆಯಡಿ ಹೆಚ್ಚುವರಿಯಾಗಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು ವಿಯ್ಯೂರು ಜೈಲಿಗೆ ಕಳುಹಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.
ಶಿಕ್ಷೆ ತಗ್ಗಿಸುವಂತೆ ಆರೋಪಿಗಳು ಮಾಡಿದ ಮನವಿಗಳನ್ನು ಕೋರ್ಟ್ ತಳ್ಳಿ ಹಾಕಿತು. ನ್ಯಾಯಾಧೀಶರು ಈ ತೀರ್ಪು ಸಮಾಜಕ್ಕೆ ಕಠಿಣ ಎಚ್ಚರಿಕೆಯಾಗಿದೆ ಎಂದು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
—–





Be the first to comment