ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ತಮ್ಮ ಸಂಗೀತ, ನಟನೆ, ನಿರ್ದೇಶನ ಹೀಗೆ ನಾನಾ ಮಜಲುಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಾಮಿಡಿ ಮಹಾರಾಜ ಸಾಧುಕೋಕಿಲಾ ಅವರು ಈಗ ಹತ್ತು ಕೋಟಿ ಬಂಡವಾಳ ಹೂಡಿ ಬೆಂಗೂರಿನಲ್ಲಿ ಲೂಪ್ ಎಂಟರ್ಟೇನ್ಮೆಂಟ್ ಎಂಬ ಹೈಟೆಕ್ ಸ್ಟುಡಿಯೋವನ್ನು ನಿರ್ಮಾಣ ಮಾಡಿದ್ದಾರೆ.
ಮೊನ್ನೆ ಈ ಸ್ಟುಡಿಯೋವನ್ನು ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಲೂಪ್ ಸ್ಟುಡಿಯೋದ ರೆಕಾರ್ಡಿಂಗ್ ರೂಂನಲ್ಲಿ ಭಕ್ತಿಗೀತೆಯೊಂದನ್ನು ಹಾಡಿದರು. ಅದು ಮತ್ತೊಂದು ರೂಮ್ನಲ್ಲಿ ರೆಕಾರ್ಡ್ ಆಗಿತ್ತು.
ಈ ವೇಳೆ ಮಾತನಾಡಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು, ನಾನು ಸಾಧುಕೋಕಿಲಾರ ಶಿಷ್ಯ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಸಂಗೀತ ನಿರ್ದೇಶಕರು ಗಾಯಕರಿಗೆ ಗುರುಗಳಿದ್ದಂತೆ, ಸಾಧುಕೋಕಿಲಾ ಅವರು ತುಂಬಾ ಒಳ್ಳೆ ಸಂಗೀತ ನಿರ್ದೇಶಕರು ಅವರ ನಿರ್ದೇಶನದ ಅನೇಕ ಚಿತ್ರಗಳಲ್ಲಿ ನಾನು ಆಡಿದ್ದೇನೆ, ಅವರಿಗೆ ಉತ್ತಮ ಸಂಗೀತ ಜ್ಞಾನವಿದೆ. ಸಂಗೀತ ಕ್ಷೇತ್ರದಲ್ಲಿ ಹಲವರು ದಿಗ್ಗಜರಿದ್ದಾರಾದರೂ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿಲ್ಲ. ಗಾಯನದಲ್ಲಿ ನನಗೆ ಆತ್ಮತೃಪ್ತಿ ಸಿಕ್ಕಿದೆ. ಸಾಧುಕೋಕಿಲಾ ಅವರು ಗುರುಗಳಿದ್ದಂತೆ, ನಾನು ಸಂಗೀತ ಕಲಿಯುತ್ತಿರುವ ವಿದ್ಯಾರ್ಥಿಯಂತೆ ಎಂದು ಹೇಳಿದರು.
ಸಂಗೀತಕ್ಕೆ ಮಳೆಯನ್ನು ತರಿಸುವ ಶಕ್ತಿಯಿದ್ದು, ಸಂಗೀತದಿಂದ ಭಗವಂತನ ಸಾಕ್ಷಾತ್ಕಾರ ಆಗುತ್ತದೆ. ಭಗವಂತನು ನಮಗೆ ನೀರನ್ನು ಕೊಟ್ಟಿದ್ದಾನೆ. ಅದನ್ನು ವಿವೇಚನೆಯಿಂದ ಬಳಸೋಣ. ನೀರಿನ ಒಂದೇ ಒಂದು ಹನಿಯೂ ನಮ್ಮದಲ್ಲ ಮುಂದಿನ ಜನಾಂಗಕ್ಕೆ ನೀರನ್ನು ಉಳಿಸೋಣ ಎಂದು ಹೇಳುವ ಮೂಲಕ ನೀರಿನ ಮಹತ್ವವನ್ನು ತಿಳಿಸಿಕೊಟ್ಟರು.
ಸಾಧುಕೋಕಿಲಾ ಮಾತನಾಡಿ, ಚಿತ್ರರಂಗಕ್ಕೆ ಬರುವ ಮುನ್ನ ನಾನು ಮದರಾಸ್ನಲ್ಲಿದ್ದೆ, ಆಗಿನಿಂದಲೂ ಎಸ್ಪಿಬಿ ಅವರು ನೋಡುತ್ತ ಬೆಳೆದಿದ್ದೇನೆ. ಎಸ್ಪಿಬಿಯವರು ಎಲ್ಲ ಪ್ರಾಕಾರದ ಕನ್ನಡ ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅತಿ ಹೆಚ್ಚು ಸಾಧನೆ ಮಾಡಿದ್ದಾರೆ. ಅದು ಗಿನ್ನೆಸ್ ದಾಖಲೆ ಆಗಬೇಕು, ಅವರು ಆಡಿರುವ ಕನ್ನಡ ಗೀತೆಗಳಿಂದ ಕನ್ನಡತನ ಜಾಗೃತವಾಗಿದೆ ಎಂದು ಹೇಳಿದರು.
ಸಾಧುಕೋಕಿಲಾ ಅವರ ಮಗ ಸುರಾಗ್ ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ಏನಾದರು ಕೊಡುಗೆ ನೀಡಬೇಕೆಂದು ಯೋಚಿಸುತ್ತಿದ್ದದರ ಫಲವೇ ಲೂಪ್ ಸ್ಟುಡಿಯೋ. ಈ ಸ್ಟುಡಿಯೋದಲ್ಲಿ ಹಲವು ವೈಶಿಷ್ಟ್ಯಗಳಿವೆ. ವಿಎಫ್ಎಕ್ಸ್, 5.1 ಸೌಂಡ್, ಡಬಿಂಗ್, ಮಿಕ್ಸಿಂಗ್, ಮಾಸ್ಟರಿಂಗ್, ಡಿಟಿಎಸ್ ಮಿಕ್ಸಿಂಗ್, ಗ್ರೇಡಿಂಗ್, ಎಡಿಟಿಂಗ್ ಮುಂತಾದ ಸೌಲಭ್ಯಗಳು ಇಲ್ಲಿ ಇದ್ದು, ಇದನ್ನು ನಮ್ಮ ಕನ್ನಡ ಚಿತ್ರರಂಗದವರು ಬಳಸಿಕೊಂಡರೆ ನಾವು ಪಟ್ಟ ಶ್ರಮಕ್ಕೆ ಫಲ ಸಿಗುತ್ತದೆ.
ಎರಡು ವರ್ಷಗಳ ಪರಿಶ್ರಮದಿಂದ ನಿರ್ಮಾಣವಾಗಿರುವ ಈ ಸ್ಟುಡಿಯೋದ ಒಳಾಂಗಣಕ್ಕೇ ಆರು ತಿಂಗಳು ಬೇಕಾಯಿತು. ಜೋನಿ ಹರ್ಷ ನಮಗೆ ಸಹಕಾರ ಕೊಟ್ಟರು. ನಿರ್ಮಾಪಕ ಸ್ನೇಹಿ ವಾತಾವರಣ ಇಲ್ಲಿದೆ ಎಂದು ಹೇಳಿದರು.ಸಂಗೀತ ಕ್ಷೇತ್ರಕ್ಕೆ ಲೂಪ್ ಸ್ಟುಡಿಯೋ ಬಲು ಪ್ರಶಸ್ತವಾಗಿದ್ದು ಸ್ಯಾಂಡಲ್ವುಡ್ ಮಂದಿ ಮಾತ್ರವಲ್ಲದೆ ಇತರೆ ಚಿತ್ರರಂಗದವರು ಇದರ ಉಪಯೋಗವನ್ನು ಪಡೆದುಕೊಳ್ಳುವಂತಾಗಲಿ.
Be the first to comment