ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಶೀಘ್ರ ಆರಂಭ

‘ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಚಿತ್ರನಗರಿ ಮಾಡಲು 160 ಎಕರೆ ಜಾಗವನ್ನು ವಾರ್ತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಎರಡು ತಿಂಗಳಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭವಾಗಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಸೋಮವಾರ ಆಯೋಜಿಸಿದ್ದ  2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಗಳನ್ನು  ಪ್ರದಾನ ಮಾಡಿ ಮಾತನಾಡಿದರು.

‘ಸರ್ಕಾರ ಕನ್ನಡ ಸಿನಿಮೋದ್ಯಮದ ಆರೋಗ್ಯಕಾರಿ ಬೆಳವಣಿಗೆಗೆ ಸದಾ ಬೆಂಬಲ ನೀಡುತ್ತದೆ. ಕೇವಲ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ. ಒಳ್ಳೆ ಸಿನಿಮಾ ಮಾಡಿ. ಜನ ಮೆಚ್ಚುವ, ಸಮಾಜದ ಮೇಲೆ ಉತ್ತಮ‌ ಪರಿಣಾಮ ಬೀರುವ ಸಿನಿಮಾ ಮಾಡಿದರೆ ಸಬ್ಸಿಡಿ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ.  ಬಾಕಿ ಇರುವ ಎಲ್ಲಾ ವರ್ಷದ ಸಬ್ಸಿಡಿಯನ್ನೂ ಒಟ್ಟಿಗೇ ನೀಡಲಾಗುವುದು’ ಎಂದು ಹೇಳಿದರು.

‘ಡಾ.ರಾಜಕುಮಾರ್ ಅವರು ಪರದೆ ಮೇಲೆ ಹೇಗಿರ್ತಿದ್ದರೋ, ನಿಜ ಜೀವನದಲ್ಲಿಯೂ ಅಷ್ಟೇ ಸರಳವಾಗಿ, ಆದರ್ಶವಾಗಿ  ಬದುಕುತ್ತಿದ್ದರು. ಇಂದಿನ ಹೀರೋಗಳೂ ಅವರಂತೆಯೇ ನಿಜ ಜೀವನದಲ್ಲಿ ವರ್ತಿಸಬೇಕು’ ಎಂದು ಸಲಹೆ ನೀಡಿದರು.

‘ಮೊದಲು ಹೆಚ್ಚು ಸಿನಿಮಾಗಳನ್ನು ನೋಡ್ತಾ ಇದ್ದೆ. ಆದರೆ ಈಗ ಸಮಯ ಸಿಗೋದಿಲ್ಲ. ಇತ್ತೀಚಿನ ಕಾಲದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ. ಆದರೆ ಕಾಂತಾರ ಚಾಪ್ಟರ್ 1 ಚಿತ್ರ ಚೆನ್ನಾಗಿದೆ ಅಂತ ಕೇಳಿದ್ದೇನೆ. ಸಮಯ ಸಿಕ್ಕರೆ ಖಂಡಿತ  ನೋಡುತ್ತೇನೆ,” ಎಂದು ಹೇಳಿದರು.

ಸಮಾರಂಭದಲ್ಲಿ ನಟಿ ಉಮಾಶ್ರೀ, ನಿರ್ದೇಶಕ ನಂಜುಂಡೇಗೌಡ,  ರಿಚರ್ಡ್ ಕ್ಯಾಸ್ಟಲಿನೊ ಸೇರಿದಂತೆ ಹಲವು ಕಲಾವಿದರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!