ಕಾಂತಾರ ಅಭಿಮಾನಿಗಳಿಗೆ ಹೊಂಬಾಳೆ ಗಿಫ್ಟ್

‘ಕಾಂತಾರ: ಚಾಪ್ಟರ್ 1’ ಚಿತ್ರದ ನಿರ್ಮಾಣ  ಸಂಸ್ಥೆ ಹೊಂಬಾಳೆ ಕನ್ನಡ ರಾಜ್ಯೋತ್ಸವದ ಪ್ರಯಕ್ತ ವಿಶೇಷ ಆಫರ್ ಘೋಷಿಸಿದೆ.

ಇದುವರೆಗೂ ದುಬಾರಿ ಇದ್ದ ಕಾಂತಾರ ಸಿನಿಮಾದ ಟಿಕೇಟ್‌ ದರ ಈಗ  ಕಡಿಮೆಯಾಗಿದೆ. ಈ ವಿಶೇಷ ಕೊಡುಗೆ ಅಕ್ಟೋಬರ್ 31ರಿಂದಲೇ ಜಾರಿಗೆ ಬರುತ್ತಿದೆ. ಕೇವಲ ಸಿಂಗಲ್ ಥಿಯೇಟರ್‌ಗಳಲ್ಲಿ ಮಾತ್ರವಲ್ಲ, ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಟಿಕೇಟ್‌ ದರ  ಕಡಿಮೆಯಾಗಿದೆ.

ಸಿಂಗಲ್ ಸ್ಕ್ರೀನ್‌ಗಳಲ್ಲಿ  99 ರೂಪಾಯಿಗೆ ‘ಕಾಂತಾರ ಚಾಪ್ಟರ್ 1’  ಸಿನಿಮಾ ವೀಕ್ಷಿಸಬಹುದಾಗಿದೆ.  ರಾಜ್ಯದ ಯಾವುದೇ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರೂಪಾಯಿಗಳಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ವೀಕ್ಷಣೆ ಮಾಡಬಹುದಾಗಿದೆ.

ರಿಲೀಸ್ ವೇಳೆ  ಚಿತ್ರದ ಟಿಕೆಟ್ ದರಗಳು ಸಾಕಷ್ಟು ಹೆಚ್ಚಾಗಿದ್ದರೂ, ಪ್ರೇಕ್ಷಕರು ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ನೋಡಿದ್ದರು. ಈ ಯಶಸ್ಸಿನ ನೆಲೆಯಲ್ಲಿ ಹೊಂಬಾಳೆ ಸಂಸ್ಥೆ ಈಗ ರಾಜ್ಯೋತ್ಸವ ಗಿಫ್ಟ್ ರೂಪದಲ್ಲಿ ಟಿಕೆಟ್ ದರ ಕಡಿತ ಘೋಷಿಸಿದೆ.

ಕಾಂತಾರ ಚಾಪ್ಟರ್ 1 ಅಕ್ಟೋಬರ್ 2 ರಂದು ಬಿಡುಗಡೆಯಾಗಿ 7 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡು, ಈಗಾಗಲೇ 818 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲಿಸಿದೆ.

ಇಂದಿನಿಂದಲೇ ‘ಕಾಂತಾರ: ಚಾಪ್ಟರ್ 1’ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭ ಆಗಲಿದೆ.  ಸಿನಿಮಾ ಒಟಿಟಿಗೆ ಬಂದಮೇಲೂ ಚಿತ್ರಮಂದಿರಗಳಿಗೆ ಜನರನ್ನು ಸೆಳೆಯಲೆಂದು ಹೀಗೊಂದು  ಆಫರ್ ನ್ನು ಹೊಂಬಾಳೆ ಮಾಡಿದೆ ಎನ್ನಲಾಗುತ್ತಿದೆ. ಸಿನಿಮಾ ಒಟಿಟಿಗೆ ಬಂದ ಮೇಲೂ  ಚಿತ್ರಮಂದಿರಕ್ಕೆ ಬಂದು ಜನ ಸಿನಿಮಾ ನೋಡ್ತಾರಾ ಎಂದು  ಕಾದು ನೋಡಬೇಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!