ಹಿರಿಯ ರಂಗಭೂಮಿ ಕಲಾವಿದ, ಹಾಸ್ಯನಟ, ಧಾರವಾಡ ರಂಗಾಯಣದ ನಿರ್ದೇಶಕ ಆಗಿದ್ದ ರಾಜು ತಾಳಿಕೋಟೆ (60) ಅವರು ಹೃದಯಾಘಾತದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಉಡುಪಿಯ ಹೆಬ್ರಿಯಲ್ಲಿ ಸಿನಿಮಾವೊಂದರ ಚಿತ್ರೀಕರಣದ ವೇಳೆ ರಾಜು ಅವರಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಕೂಡಲೇ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ವಿಜಯಪುರದ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದ ರಾಜು ತಾಳಿಕೋಟೆ ಅವರು, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು. ರಂಗಭೂಮಿಯ ನಟನೆಯ ಮೂಲಕ ಪ್ರಸಿದ್ಧಿ ಪಡೆದ ಅವರು ಬಳಿಕ ಚಲನ ಚಿತ್ರಗಳಲ್ಲಿ ನಟಿಸಿದ್ದರು. ಬಿಗ್ ಬಾಸ್ ವೇದಿಕೆಯಲ್ಲೂ ಕಾಣಿಸಿಕೊಂಡಿದ್ದರು.
ರಂಗಭೂಮಿ ವೃತ್ತಿಯ ರಾಜು ತಾಳಿಕೋಟೆ ಅವರು ಮನಸಾರೆ, ಪಂಚರಂಗಿ, ಮತ್ತೊಂದು ಮದುವೆನಾ, ಮೈನಾ ಸಿನಿಮಾಗಳಲ್ಲಿ ನಟಿಸಿದ್ದರು. ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ‘ಖಾಸ್ಗತೇಶ್ವರ’ ನಾಟಕ ಮಂಡಳಿಯ ಮಾಲೀಕರಾಗಿ, ಕುಡುಕನ ಪಾತ್ರಗಳ ಮೂಲಕ ಮನೆಮಾತಾಗಿದ್ದರು.
ರಾಜು ಅವರ ನಿಧನದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.





Be the first to comment