ಚೆನ್ನೈನಲ್ಲಿ ನಡೆಯಬೇಕಿದ್ದ ಕಾಂತಾರ 1 ಪ್ರಚಾರ ರದ್ದು

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಚಿತ್ರತಂಡ ಚೆನ್ನೈನಲ್ಲಿ ನಡೆಯಬೇಕಿದ್ದ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.

ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವಿಗೀಡಾದ ಕಾರಣ ನಿರ್ಮಾಪಕರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.

‘ಇತ್ತೀಚಿನ ದುರದೃಷ್ಟಕರ ಘಟನೆಯಿಂದಾಗಿ, ನಾಳೆ (ಮಂಗಳವಾರ) ಚೆನ್ನೈನಲ್ಲಿ ನಡೆಯಬೇಕಿದ್ದ ಕಾಂತಾರ: ಚಾಪ್ಟರ್ 1 ಪ್ರಚಾರ ಕಾರ್ಯಕ್ರಮವನ್ನು  ರದ್ದುಗೊಳಿಸುತ್ತಿದ್ದೇವೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಬಾಧಿತರೊಂದಿಗೆ ಇವೆ. ನಿಮ್ಮ ತಿಳುವಳಿಕೆಗೆ ಧನ್ಯವಾದಗಳು. ಸೂಕ್ತವಾದ ಸಮಯದಲ್ಲಿ ತಮಿಳುನಾಡಿನ ನಮ್ಮ ಪ್ರೇಕ್ಷಕರನ್ನು ಭೇಟಿ ಮಾಡಲು ನಾವು ಎದುರು ನೋಡುತ್ತಿದ್ದೇವೆ’ ಎಂದು ನಿರ್ಮಾಪಕರು ಬರೆದಿದ್ದಾರೆ.

ಕಾಂತಾರ  1 ಚಿತ್ರ  ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.   ಕೊಚ್ಚಿ ಮತ್ತು ಹೈದರಾಬಾದ್‌ನಲ್ಲಿ ಪ್ರಚಾರ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರ ಚಿತ್ರತಂಡ ಪ್ರಚಾರದ ಭಾಗವಾಗಿ ಚೆನ್ನೈಗೆ ಭೇಟಿ ನೀಡಬೇಕಿತ್ತು.

ಕರೂರಿನಲ್ಲಿ ನಟ, ರಾಜಕಾರಣಿ ವಿಜಯ್ ಅವರ ರಾಜಕೀಯ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವಿಗೀಡಾಗಿದ್ದು, ಸುಮಾರು 150 ಜನರು ಗಾಯಗೊಂಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿರುವ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್, ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಹರಿಪ್ರಶಾಂತ್ ಎಂಜಿ, ಶನೀಲ್ ಗೌತಮ್, ನವೀನ್ ಬೊಂಡೆಲ್ ಮುಂತಾದವರು ನಟಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!