ಜೀ5, ಪಿಆರ್ಕೆ ಪ್ರೊಡಕ್ಷನ್ಸ್ ಸಹಯೋಗದ ವೆಬ್ ಸರಣಿಗೆ ‘ಮಾರಿಗಲ್ಲು’ ಶೀರ್ಷಿಕೆ ಅಧಿಕೃತವಾಗಿ ನೀಡಲಾಗಿದೆ.
ಜೀ5 ಕಡೆಯಿಂದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಆಗಿದೆ. ಈ ವೆಬ್ ಸರಣಿಯಲ್ಲಿ ಕರ್ನಾಟಕ ಜಾನಪದವನ್ನು ಹೇಳುವ ಒಂದು ದೈವಿಕ ಥ್ರಿಲ್ಲರ್ ಕಹಾನಿ ಇರಲಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ.
ಈ ವೆಬ್ ಸರಣಿಯಲ್ಲಿ4ನೇ ಶತಮಾನದ ಕದಂಬರ ಆಳ್ವಿಕೆಯ ಕಥೆ ಇರಲಿದೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ತಿಳಿಸುತ್ತದೆ. ಕದಂಬರ ಕಾಲದಿಂದಲ್ಲೂ ಮಾರಿ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕುರಿತಾಗಿ ಕಥೆಯನ್ನು ಹೆಣೆಯಲಾಗಿದೆ. ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾದ ಪಾತ್ರಗಳು ಈ ವೆಬ್ ಸರಣಿಯಲ್ಲಿ ಇರಲಿವೆ.
‘ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ. ಆ ರೀತಿಯ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. ಮಾರಿಗಲ್ಲು ಅಂತಹ ಒಂದು ಕಥೆಯಾಗಿದೆ’ ಎಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಹೇಳಿದ್ದಾರೆ.
‘ಮಾರಿಗಲ್ಲು ನಾವು ಹಿಂದೆಂದೂ ಮಾಡಿರದ ಪ್ರಯೋಗವಾಗಿದೆ. ದುರಾಸೆ, ರಹಸ್ಯ, ಮೋಹ, ದೈವ ಭಕ್ತಿ ಮುಂತಾದ ಅನೇಕ ವಿಷಯಗಳ ವಿಭಿನ್ನ ಮಿಶ್ರಣವಾದ ಈ ಕಥೆ ಕನ್ನಡ ನಾಡಿನ ಜಾನಪದವನ್ನು ಎತ್ತಿ ಹಿಡಿಯಲಿದೆ. ಕದಂಬ ವಂಶಸ್ಥರ ಸಾಧನೆಗಳನ್ನು ಜೀವಂತವಾಗಿಸುವ ಪ್ರಯತ್ನವನ್ನು ಇದರಲ್ಲಿ ಕಾಣಬಹುದು’ ಎಂದು ಜೀ5 ಬಿಸಿನೆಸ್ ಮುಖ್ಯಸ್ಥ ದೀಪಕ್ ಶ್ರಿರಾಮುಲು ಹೇಳಿದ್ದಾರೆ.
—–





Be the first to comment