ಕಾಂತಾರ ಚಾಪ್ಟರ್ 1: ತೆಲುಗಿನ ರೈಟ್ಸ್ 100 ಕೋಟಿಗೆ ಬಿಕರಿ

2025ರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾಗಿರುವ ಕಾಂತಾರ ಚಾಪ್ಟರ್ 1 ಬಿಡುಗಡೆಗೂ ಮುನ್ನವೇ ತೆಲುಗಿನ ರೈಟ್ಸ್ 100 ಕೋಟಿಗೆ ಬಿಕರಿಯಾಗಿದೆ.

ಮಾಹಿತಿ ಪ್ರಕಾರ 100 ಕೋಟಿಗೂ ಹೆಚ್ಚು ಮೊತ್ತಕ್ಕೆ ಥಿಯೇಟರ್ ರೈಟ್ಸ್ ಬಿಕರಿಯಾಗಿದೆ. ತೆಲಂಗಾಣದ ನಿಜಾಮ್ ಭಾಗದ ರೈಟ್ಸ್ 40 ಕೋಟಿ, ಕರಾವಳಿ ಆಂಧ್ರದ ರೈಟ್ಸ್ 45 ಕೋಟಿ ಹಾಗೂ ಇತರೆ 15 ಕೋಟಿಗೆ ಬಿಕರಿಯಾಗಿದ್ದು ಒಟ್ಟಾರೆ 100 ಕೋಟಿ ಬಾಚಿಕೊಂಡಿದೆ.

ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್​ 1 ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಸಂಚಲನ ಮೂಡಿಸಿದೆ. ಅಕ್ಟೋಬರ್ 2ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ಚಿತ್ರ ಬಿಡುಗಡೆಗೆ ಹೊಂಬಾಳೆ ಫಿಲ್ಮ್ಸ್ ತಯಾರಿ ನಡೆಸುತ್ತಿದೆ. ಸದ್ಯ ಚಿತ್ರೀಕರಣ ಪೂರ್ಣಗೊಂಡಿದ್ದು ಎಡಿಟಿಂಗ್ ಕೆಲಸ ನಡೆಯುತ್ತಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ದೈವಿಕ ಪ್ರಧಾನ ಚಿತ್ರ ಕಾಂತಾರ: ಒಂದು ದಂತಕಥೆ 2022ರಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. 15 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದ್ದ ಚಿತ್ರ ದೇಶಾದ್ಯಂತ 450 ಕೋಟಿ ರೂಪಾಯಿ ಗಳಿಸಿ ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು.

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್  ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಿಷಬ್ ಶೆಟ್ಟಿ ಅವರು ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!