ಲವ್ ಮಾಡೋ ಹುಡುಗಿಗೆ ಐಸ್ಕ್ರೀಮ್ ಕೊಡ್ಸಿ ಪೂಸಿ ಹೊಡಿಯೋದು, ಅವಳನ್ನು ಯಾರದ್ರು ಗುರಾಯಿಸಿದ್ರೆ ಒಂದೇ ಏಟಿಗೆ ಹತ್ತು ಜನರನ್ನು ಹೊಡೆದುರುಳಿಸೋದು, ಅವಳ ಬೆರಳುಗಳ ಜೊತೆ ಆಟವಾಡುತ್ತಾ ಆಕೆಯ ಮಡಿಲಿಗೆ ಆಟಾಡೋ ಬೇಬಿ ಕೊಡೋದು,… ಹೀಗೆ ಇಂತಹ ಅತೀ ಸಾಮಾನ್ಯ ಸಂಗತಿಗಳನ್ನು ಚಿತ್ರದ ತುಂಬಾ ತುರುಕಿ ನೋಡುಗನನ್ನು ಮೆಚ್ಚಿಸುವ ನಿರ್ದೇಶಕರು ನಮ್ಮೊಡನಿದ್ದಾರೆ. ಆದರೆ, ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇವೆಲ್ಲಕ್ಕೂ ತದ್ವಿರುದ್ಧ! ಚಿತ್ರದಲ್ಲಿ ನೋಡುಗನನ್ನು ಇಪ್ರೆಸ್ ಮಾಡುಬಹುದಾದ ಸಾಕಷ್ಟು ಸಂಗತಿಗಳಿದ್ದವು. ಕೊಲೆ.. ತನಿಖೆ.. ಸಸ್ಪೆನ್ಸ್.. ವೈದಕೀಯ ಜಾಲ.. ಹೀಗೆ ಸಾಕಷ್ಟು ಸಂಗತಿಗಳಿವೆ. ಆದರೆ ಚಿತ್ರ ಎಲ್ಲೂ ನೋಡುಗನನ್ನು ಕಾಡುವುದಿಲ್ಲ. ಚಿತ್ರಕಥೆಯಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಹೊರಟಿದ್ದ ಶಂಕರ್ ಅದನ್ನು ತೆರೆಗೆ ತರುವಲ್ಲಿ ಸೊರಗಿದ್ದಾರೆ.
ಶಂಕರ್ ಹೊರನೋಟಕ್ಕೆ ಹರಿಪ್ರಿಯಾರನ್ನು ಹುಡುಗನಂತೆ ನಟನೆ ಮಾಡಿಸುವ ಪ್ರಯತ್ನ ಮಾಡಿದ್ದಾರಾದರೂ. ಹರಿಪ್ರಿಯಾರವರ ಆಂತರಿಕ ನಟನೆಯಲ್ಲೂ ಅದನ್ನು ಹೊರತರುವ ಪ್ರಯತ್ನದಲ್ಲಿ ಸೋತಿದ್ದಾರೆ. ಸಿಟ್ಟು ಬಂದರೆ ಬೈಕ್ ಏರಿ ಹೊರಟರೆ ಸಾಕೆ? ಎದುರು ಸಿಕ್ಕ ಗಂಡು ಜಾತಿಯವರಿಗೆಲ್ಲಾ ಪ್ರಪೋಸ್ ಮಾಡುತ್ತಲೇ ಹೋದರೆ ಆಕೆ ಗಿಟ್ಟಿಗಿತ್ತಿ ಅನ್ನಿಸಿಕೊಂಡಾಳೆಯೇ?
ಕಾಲ ಕಳೆದಂತೆ ದೊಡ್ಡ ಪೋಲಿಸ್ ಆಫೀಸರ್ ಆಗುವ ವೈದೇಹಿ(ಹರಿಪ್ರಿಯಾ) ಎಂಥಹ ಕೇಸುಗಳನ್ನಾದರೂ ಶಂಕರ್ ಚಿತ್ರಕಥೆಯ ಪ್ರಕಾರ ಚಾಣಾಕ್ಷತನದಿಂದ ಬೇಧಿಸುತ್ತಾಳೆ. ಇಂತಹ ವೈದೇಹಿಯ ಕೈಗೆ ಅಚಾನಕ್ ಆಗಿ ವೈದ್ಯೆಯೊಬ್ಬಳ ಸಾವಿನ ಫೈಲು ಸಿಗುತ್ತದೆ. ಆ ಸಾವು ಅಸಹಜ ಅನ್ನೋದು ಅಲ್ಲಿರುವ ಒಂದಕ್ಕೊಂದು ಟ್ಯಾಲೀ ಆಗದ ಸಾಕ್ಷಿಗಳು ಹೇಳುತ್ತಿರುತ್ತವೆ. ಈ ಸಾವಿನ ಹಿಂದೆ ಬೀಳುತ್ತಾಳೆ ವೈದೇಹಿ. ಅದೊಂದು ಮರ್ಡರಾ? ಸುಸೈಡಾ? ಅನ್ನೋದನ್ನು ವೈದೇಹಿ ಬೇಧಿಸುತ್ತಾಳಾ.. ಅನ್ನೋದೆ ಪಾರ್ವತಮ್ಮನ ಮಗಳ ಜರ್ನಿ.
ಇಲ್ಲಿ, ಪಾರ್ವತಮ್ಮ(ಸುಮಲತಾ) ಅವರಿಗೆ ತನ್ನ ಮಗಳು ವೈದೇಹಿಗೆ ಹೇಗಾದರೂ ಒಂದು ತಾಳಿ ಕಟ್ಟಿಸಬೇಕು ಎಂಬ ಮಹತ್ವಾಕಾಂಕ್ಷೆ. ತನ್ನ ಪ್ರೀತಿ ಮತ್ತು ವಾತ್ಸಲ್ಯವನ್ನು ಯಥೇಚವಾಗಿ ಮಗಳ ಮೇಲೆ ಸುರಿಯುವ ಪಾತ್ರದಲ್ಲಿ ಸುಮಲತಾ ಎಲ್ಲೂ ಎಡವುದಿಲ್ಲ. ಇಂಟ್ರೆಸ್ಟಿಂಗ್ ಪಾರ್ಟ್ ಅಂದ್ರೆ ತನ್ನ ಬಾಯ್ಫ್ರೆಂಡ್ಗೆ ಕಾಟ ಕೊಟ್ಟವರಿಗೆ ಎಂದೂ ಕ್ರಿಕೆಟ್ ಆಡದ ವೈದೇಹಿ ಮಿರುಗುವ ಹೊಚ್ಚ ಹೊಸ ಬ್ಯಾಟ್ನಲ್ಲಿ ಅವರನ್ನು ಸದೆ ಬಡೆಯುತ್ತಾಳೆ. ‘ತನ್ನನ್ನು ಈತ ಪ್ರೀತಿಸುತ್ತಾನೆ’ ಎಂದು ಈಕೆಗೆ ಅನ್ನಿಸಿದರೆ `ನನ್ನ ಮದುವೆ ಆಗ್ತಿಯಾ’ ಅಂತ ಕೇಳಿಯೇ ಬಿಡುತ್ತಾಳೆ. ಇದನ್ನು ಕೇಳಿದ ಗಂಡು ಪ್ರಾಣಿ ಜೊಲ್ಲು ಸುರಿಸುವ ಹೊತ್ತಿಗೆ ಶಂಕರ್ ಕಥೆಯನ್ನು ಇನ್ನೊಂದೆಡೆಗೆ ತಿರುಗಿಸುತ್ತಾರೆ.
ಇಡೀ ಚಿತ್ರ ಆವರಿಸಿಕೊಂಡಿರುವ ಹರಿಪ್ರಿಯಾ, ಬ್ಯಾಲೆನ್ಸ್ಡ್ ಆದ ಪರ್ಫಾಮೆನ್ಸ್ ನೀಡುವ ಪ್ರಯತ್ನ ಮಾಡಿದ್ದಾರೆ. ಆದರೆ ಕೆಲವು ಸೀನುಗಳಲ್ಲಿ ಈ `ಬ್ಯಾಲೆನ್ಸ್ ಆ್ಯಕ್ಟ್’ ಫಾರ್ಮುಲಾ ಕೈಕೊಟ್ಟು ವೈದೇಹಿ ಸಪ್ಪಗೆ ಕಾಣುತ್ತಾಳೆ. ಚಿತ್ರದಲ್ಲಿ ಇದ್ದ ಪಾತ್ರಗಳಲ್ಲಿ ಹರಿಪ್ರಿಯಾ ಮತ್ತು ಸುಮಲತಾ ಅವರನ್ನು ಬಿಟ್ಟರೆ, ನಟ ತರಂಗ ವಿಶ್ವ ಸಿಕ್ಕ ಅವಕಾಶದಲ್ಲೇ ಇಷ್ಟವಾಗುತ್ತಾರೆ. ಡೈರೆಕ್ಟರ್ ಶಂಕರ್ ಅಬ್ಬರವೆಂಬ ಗೊಬ್ಬರ ಬೇಡವೆಂದು ತಿರ್ಮಾನಿಸಿದ್ದರ ಕಾರಣವೋ ಏನೋ ಒಬ್ಬ ಸಾಮಾನ್ಯ ಪ್ರೇಕ್ಷಕನ ನೀಡ್ಸ್ ಅನ್ನು ಚಿತ್ರ ನೀಡುವುದಿಲ್ಲ. ಟ್ವಿಸ್ಟ್&ಟರ್ನ್ಗಳಿರುವ ಕಥೆಯನ್ನು ಇಟ್ಟುಕೊಂಡು ಸರಾಗವಾಗಿ ಚಂದಮಾಮ ಕಥೆ ಹೇಳ ಹೊರಟಿದ್ದರ ಪರಿಣಾಮ ಡಾಟರ್&ಪಾರ್ವತಮ್ಮ ಇಬ್ಬರೂ ಸಪ್ಪೆ ಸಪ್ಪೆ. ನಿದೇಶಕನಾದವನು ತಾನು ಆರಿಸಿಕೊಂಡ ಜಾನರ್ ಮತ್ತು ಅದನ್ನು ನೋಡಗನಿಗೆ ತಲುಪಿಸಲು ಬಳಸುವ ನಿರೂಪಣಾ ಶೈಲಿಯ ಬಗ್ಗೆ ಎಚ್ಚರದಿಂದ ಇರಬೇಕು ಎಂಬುದನ್ನು
‘ಪಾರ್ವತಮ್ಮ’ ನಿರೂಪಿಸುತ್ತದೆ. ಇನ್ನು, ಇಂತಹದೊಂದು ಕಥೆಗೆ ಹರಿಪ್ರಿಯಾನೇ ಯಾಕೆ? ಹರಿಪ್ರಿಯಾರ 25ನೇ ಚಿತ್ರ ಕೇವಲ ಲೆಕ್ಕಕ್ಕಷ್ಟೇನಾ? ಶಂಕರ್ ಮನಸ್ಸು ಮಾಡಿದ್ದರೆ `ಪಾರ್ವತಮ್ಮ’ ಚಿತ್ರವನ್ನು ಹರಿಪ್ರಿಯಾರ ಚಿತ್ರಬದುಕಿನ ಮೈಲುಗಲ್ಲು ಮಾಡಬಹುದಿತ್ತಾ?.. ಇಂತಹ ಪ್ರಶ್ನೆಗಳು ನೋಡುಗನ ತಲೆಯೊಳಗೆ ಹೊಕ್ಕಿತೇ ಹೊರತು, ಚಿತ್ರವನ್ನು ನೋಡುವಂತೆ ಇನ್ನೊಬ್ಬರಿಗೆ ರೆಫರ್ ಮಾಡುವುದು ಕಷ್ಟ ಕಷ್ಟ! ಜೊತೆಗೆ, `ಪಾರ್ವತಮ್ಮ’ ಎಂಬ ಕ್ಯಾಚೀ&ಪವರ್ಫುಲ್ ಟೈಟಲ್ ಇದ್ದ ಮಾತ್ರಕ್ಕೆ ಜನ ಚಿತ್ರ ನೋಡೇ ನೋಡುತ್ತಾರೆ ಅನ್ನುವ ದಡ್ಡತನದ ಲೆಕ್ಕಾಚಾರ ವರ್ಕ್ಔಟ್ ಆಗೋದು ಅಸಾಧ್ಯ.
Rating: **
Star Cast: ಹರಿಪ್ರಿಯಾ, ಸುಮಲತಾ, ಸೂರಜ್ ಗೌಡ, ಪ್ರಭು, ತರಂಗ ವಿಶ್ವ
Director: ಶಂಕರ್ ಜೆ
ವಿಮರ್ಶೆ: Bcinemas.in
Be the first to comment