‘ಸೂಜಿದಾರ’ ಚಿತ್ರದ ವಿವಾದದಿಂದ ಚಿತ್ರರಂಗದ ಮಂದಿಯ ಕೆಂಗೆಣ್ಣಿಗೆ ಗುರಿಯಾಗಿದ್ದ ನಟಿ ಹರಿಪ್ರಿಯಾ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ನಟನೆಯ 25ನೇಕನ್ನಡ ಚಿತ್ರದ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಟಿ ಹರಿಪ್ರಿಯಾ ಲೀಡ್ ರೋಲ್ ನಲ್ಲಿ ಕಾಣಿಸಿರುವ ಈ ಚಿತ್ರದಲ್ಲಿ ಸುಮಲತಾ ಅಂಬರೀಷ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಸುಮಲತಾರವರದ್ದು ಪಾರ್ವತಮ್ಮರ ಪಾತ್ರ. ಇದೇ 24ರಂದು ತೆರೆ ಕಾಣುತ್ತಿರುವ ಈ ಚಿತ್ರ ಟೀಸರ್ ನಿಂದಲೇ ಸಾಕಷ್ಟು ಸುದ್ದಿ ಹಾಗೂ ಸದ್ದು ಮಾಡಿ ಈಗ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿದೆ.
ಇನ್ನು,ಡಾಟರ್ ಆಫ್ ಪಾರ್ವತಮ್ಮ ಚಿತ್ರದ ‘ಜೀವಕ್ಕಿಲ್ಲಿ. . .’ ಎಂಬ ಹಾಡನ್ನು ನಟ ಧನಂಜಯ್ ಅವರೇ ರಚಿಸಿರುವುದು ವಿಶೇಷ. ತಾಯಿ-ಮಗಳ ಬಾಂಧವ್ಯದ ಜೊತೆಗೆ ಕ್ರೈಂ ಸುತ್ತ ನಡೆಯುವ ಥ್ರಿಲ್ಲರ್ ಎಳೆಯನ್ನು ಹೊಂದಿರುವ ಚಿತ್ರದಲ್ಲಿ ವೈದೇಹಿ ಹೆಸರಿನ ತನಿಖಾಧಿಕಾರಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ನಿಜಕ್ಕೂ ಹರಿಪ್ರಿಯಾ ಕನ್ನಡದಲ್ಲಿ 25 ಚಿತ್ರಗಳನ್ನು ಪೂರೈಸಿರೋದು ದೊಡ್ಡ ಸಾಧನೆಯೇ. ಒಂದೈದು ಚಿತ್ರ ಮಾಡುವುದೊರಳಗೇ ಆಕಾಶದಲ್ಲಿ ಹಾರಾಡಿ, ತಮ್ಮ ಬದುಕಿಗೇ ತಾವೇ ಚಪ್ಪಡಿಕಲ್ಲು ಎಳೆದುಕೊಳ್ಳವುವ ದುರಹಂಕಾರದಿಂದ ತೂರಾಡುವ ಹೀರೋಯಿನ್ ಗಳ ಮಧ್ಯೆ ಹರಿಪ್ರಯಾ ಡೆಡಿಕೇಶನ್ ನಟನೆ ಅರಸಿ ಬರುವವರಿಗೆ ಮಾದರಿಯಾಗಬಲ್ಲುದು. ವಿವಿಧ ಜಾನರ್ನ ಚಿತ್ರಗಳನ್ನುಆರಿಸಿಕೊಂಡು ನಟನೆಯನ್ನು ಶಾರ್ಪ್ ಮಾಡಿಕೊಳ್ಳುತ್ತಿರುವ ಹರಿಪ್ರಿಯಾರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಚಿತ್ರರಸಿಕರಲ್ಲಿ ಸಾಕಷ್ಟು ನಿರೀಕ್ಷೆಯಿದೆ.
ದಿಶಾ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಶಂಕರ್ ನಿರ್ದೇಶನವಿದ್ದು, ಕೆ ಎಂ ಶಶಿಧರ್, ಎಂ ವಿಜಯಲಕ್ಷ್ಮೀ ಹಾಗು ಕೃಷ್ಣೇಗೌಡ ಅವರು ಬಂಡವಾಳ ಹೂಡಿದ್ದಾರೆ. ಅರುಳ್ ಕೆ. ಸೋಮಸುಂದರನ್ ಕ್ಯಾಮೆರಾ ಕೈಚಳಕ ಹಾಗೂ ಮಿಥುನ್ ಮುಕುಂದನ್ ಸಂಗೀತವಿದೆ. ಮಿಥುನ್ ಮುಕುಂದನ್ ಸಂಗೀತ ಚಿತ್ರಕ್ಕೊಂದು ಪ್ಲಸ್ ಪಾಯಿಂಟ್ ಆಗುವುದರಲ್ಲಿ ಸಂಶಯವಿಲ್ಲ. ಸುರೇಶ್ ಆರ್ಮುಗಂ ಸಂಕಲನ ಹಾಗೂ ಪ್ರಗತಿ ರಿಷಬ್ ಶೆಟ್ಟಿ ಮತ್ತು ಪುಟ್ಟರಾಜು ಅವರ ವಸ್ತ್ರವಿನ್ಯಾಸವಿದೆ.
ಚಿತ್ರದ ಟೈಟಲ್ ‘ಡಾಟರ್ ಆಫ್ ಪಾರ್ವತಮ್ಮ’ ಅಂತಿದ್ದರೂ, ವರನಟ ರಾಜ್ಕುಮಾರ್ ಅವರ ಧರ್ಮ ಪತ್ನಿ ಪಾರ್ವತಮ್ಮ ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಅನ್ನುವುದನ್ನು ಚಿತ್ರತಂಡ ಅದಾಗಲೇ ಸ್ಪಷ್ಟಪಡಿಸಿದೆ.
-ಕಿಸ್ ಬಾಯ್ ದಾಸ್
Be the first to comment