ಚಿತ್ರ: ಅವನಿರಬೇಕಿತ್ತು
ನಿರ್ದೇಶಕ: ಅಶೋಕ್ ಸಾಮ್ರಾಟ್
ತಾರಾ ಬಳಗ: ಭರತ್, ಸೌಮ್ಯ, ಜಯಸಿಂಹ, ಲಕ್ಷ್ಮೀದೇವಮ್ಮ ಇತರರು
ರೇಟಿಂಗ್: 3.5
ತಂದೆಯ ಹಾಗೂ ತನ್ನ ಹೆಸರು ಒಂದೇ ಇರುವ ವ್ಯಕ್ತಿಗಳು ಎದುರಿಸುವ ಕಾನೂನು ತೊಡಕಿನ ವಿಷಯವನ್ನು ಇಟ್ಟುಕೊಂಡು ಈ ವಾರ ಸಸ್ಪೆನ್ಸ್ ಮಾದರಿಯ ಅವನಿರಬೇಕಿತ್ತು ಚಿತ್ರ ತೆರೆಯ ಮೇಲೆ ಬಂದಿದೆ.
ಮಾರ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುವ ನಾಯಕ ಹಾಗೂ ನಾಯಕಿ ಮಾಲೀಕರ ಆದೇಶದಂತೆ ಬೇರೆ ಅಂಗಡಿಗಳಿಗೆ ಹೋಗಿ ಶಾಪಿಂಗ್ ಮಾಡಿಕೊಂಡು ಬರಲು ವಿವಿಧ ಅವತಾರವನ್ನು ತಾಳುತ್ತಾರೆ. ಮುಂದೆ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ.
ಎಲ್ಲವೂ ಚೆನ್ನಾಗಿದೆ ಎನ್ನುವಾಗ ನಾಯಕ ಹಣಕಾಸಿನ ಸಮಸ್ಯೆಗೆ ಸಿಲುಕುತ್ತಾನೆ. ತನ್ನದಲ್ಲದ ಸಾಲಕ್ಕೆ ಅವನು ಹೊಣೆಗಾರ ಆಗುತ್ತಾನೆ. ಇದರ ಹಿಂದಿನ ಸತ್ಯ ಹುಡುಕುವ ನಾಯಕ, ಮೋಸ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧನ ಮಾಡುತ್ತಾನೆ. ಆಗ ಮಹಿಳೆಯೊಬ್ಬಳ ಆಗಮನವಾಗುತ್ತದೆ. ಹಣಕಾಸು ವಿಷಯದಲ್ಲಿ ನಾಯಕನಿಗೆ ಮೋಸ ಮಾಡಿದವರು ಯಾರು? ಬಂಧಿತ ವ್ಯಕ್ತಿಯನ್ನು ಬಿಡಿಸಿಕೊಳ್ಳಲು ಮಹಿಳೆ ಬಂದಿದ್ದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿನಿಮಾ ನೋಡಬೇಕಿದೆ.
ಚಿತ್ರದ ಕಥಾ ವಸ್ತು ಕುತೂಹಲಕರವಾಗಿದೆ. ನಿರ್ದೇಶಕರು ಪ್ರೇಕ್ಷಕನ ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳಿಗೆ ನಿಧಾನವಾಗಿ ಉತ್ತರ ಕೊಡುತ್ತಾರೆ. ಒಂದೇ ಹೆಸರಿನ ವ್ಯಕ್ತಿಗಳು ಎದುರಿಸುವ ಸಮಸ್ಯೆಯ ಬಗ್ಗೆ ಕಥೆಯನ್ನು ಮುಂದಿಟ್ಟಿದ್ದಾರೆ.
ನಾಯಕ ಭರತ್ ಹಾಗೂ ನಾಯಕಿ ಸೌಮ್ಯ ನಟನೆಯಲ್ಲಿ ಓಕೆ ಅನಿಸುತ್ತಾರೆ. ಉಳಿದಂತೆ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.
ಲೋಕಿ ತಪಸ್ಯ ಸಂಗೀತ, ದೇವರಾಜ ಪೂಜಾರಿ ಕ್ಯಾಮೆರಾ ಕೆಲಸ ಚೆನ್ನಾಗಿದೆ. ಸಸ್ಪೆನ್ಸ್ ನಲ್ಲಿ ಸಾಗುವ ಚಿತ್ರವನ್ನು ಪ್ರೇಕ್ಷಕರು ಒಂದು ಬಾರಿ ನೋಡಲು ಅಡ್ಡಿಯಿಲ್ಲ ಎನ್ನಬಹುದು.





Be the first to comment