ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ, ಫಿಲಂ ಚೇಂಬರ್ಗೆ ಪತ್ರ ಬರೆದಿದೆ.
ಕಮಲ್ ಹಾಸನ್ ಅವರು ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ನೀಡಿರುವ ಹೇಳಿಕೆ ಬೆನ್ನಲ್ಲೆ ‘ಥಗ್ ಲೈಫ್’ ಸಿನಿಮಾದ ಬಿಡುಗಡೆ ಮೇಲೆ ಹೇರಲಾಗಿರುವ ನಿಷೇಧದ ಕುರಿತು ಪತ್ರದಲ್ಲಿ ಉಲ್ಲೇಖಿಸಿ, ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕರ ಸಂಘ ಪತ್ರದಲ್ಲಿ ಮನವಿ ಮಾಡಿದೆ.
‘ಕಮಲ್ ಹಾಸನ್ ಅವರ ಹೇಳಿಕೆ ಪ್ರೀತಿಯಿಂದ ಆಡಿದ ಮಾತಾಗಿತ್ತು, ಕನ್ನಡ ಭಾಷೆಯ ಗೌರವವನ್ನು ಕಡಿಮೆ ಮಾಡುವುದು ಅವರ ಉದ್ದೇಶ ಆಗಿರಲಿಲ್ಲ. ತಮಿಳು ಹಾಗೂ ಕನ್ನಡ ಸಿನಿಮಾ ರಂಗಗಳ ನಡುವೆ ಒಳ್ಳೆಯ ಬಾಂಧವ್ಯ ಇದೆ. ಸುದೀಪ್, ಶಿವರಾಜ್ ಕುಮಾರ್, ಕಿಶೋರ್, ದುನಿಯಾ ವಿಜಯ್, ಅಚ್ಯುತ್ ಕುಮಾರ್ ಇನ್ನೂ ಹಲವು ಕನ್ನಡದ ನಟರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೇ ಕಠಿಣವಾದ ನಿರ್ಧಾರವು ಎರಡು ಚಿತ್ರರಂಗಗಳ ನಡುವೆ ಇರುವ ಬಾಂಧವ್ಯವನ್ನು ಹಾಳು ಮಾಡಲಿದೆ. ಬಾಂಧವ್ಯ ಹಾಳು ಮಾಡುವ ಸಂದರ್ಭಗಳನ್ನು ನಿವಾರಿಸಿ ಸಿನಿಮಾದ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು’ ಎಂದು ಪತ್ರದಲ್ಲಿ ಹೇಳಲಾಗಿದೆ.
ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಕಮಲ್ ಹಾಸನ್ ಫಿಲಂ ಚೇಂಬರ್ಗೆ ಈಗಾಗಲೇ ಪತ್ರ ಬರೆದಿದ್ದಾರೆ. ಆದರೆ ಅದರಿಂದ ಯಾವುದೇ ಉಪಯೋಗವಾಗಿಲ್ಲ.
—-

Be the first to comment