ಚಿತ್ರ: ಕುಲದಲ್ಲಿ ಕೀಳ್ಯಾವುದೋ
ನಿರ್ದೇಶನ: ರಾಮ್ ನಾರಾಯಣ್
ನಿರ್ಮಾಣ: ಯೋಗರಾಜ್ ಭಟ್ ಸಿನಿಮಾಸ್, ಸಂತೋಷ್ ಕುಮಾರ್, ವಿದ್ಯಾ
ತಾರಾ ಬಳಗ: ಮಡೆನೂರು ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ಕರಿ ಸುಬ್ಬು, ತಬಲಾ ನಾಣಿ, ಯೋಗರಾಜ ಭಟ್, ಇತರರು
ರೇಟಿಂಗ್: 3.5
ಸಮಾಜದಲ್ಲಿರುವ ಮೇಲು, ಕೀಳು ಎನ್ನುವ ತಾರತಮ್ಯದ ಸಾಮಾಜಿಕ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡುವ ಚಿತ್ರ ಈ ವಾರ ತೆರೆಗೆ ಬಂದಿರುವ ‘ ಕುಲದಲ್ಲಿ ಕೀಳ್ಯಾವುದೋ ‘.
ಈ ಚಿತ್ರ ಸಾಮಾಜಿಕ ಸಮಸ್ಯೆಯ ಬಗ್ಗೆ ಗಮನ ಸೆಳೆಯುವ ಜೊತೆಗೆ ಮೇಲು – ಕೀಳು ಎನ್ನುವ ಭಾವನೆಯನ್ನು ಬಿಟ್ಟು ಸಹಬಾಳ್ವೆ ನಡೆಸಿ ಎನ್ನುವ ಸಂದೇಶ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಸಾರುವ ಚಿತ್ರವಾಗಿ ಮೂಡಿ ಬಂದಿದೆ.
ಊರಿನಲ್ಲಿ ನಡೆಯುವ ಮೇಲು – ಕೀಳು ಎನ್ನುವ ದೌರ್ಜನ್ಯವನ್ನು ಸಹಿಸಲಾಗದೆ ಮುತ್ತರಸನ ಪಾತ್ರಧಾರಿ ಯೋಗರಾಜ್ ಭಟ್ ಕಾಡು ಸೇರಿಕೊಳ್ಳುತ್ತಾನೆ. ಮುಂದೆ ಅರಣ್ಯ ಇಲಾಖೆ ಆ ಜನರನ್ನು ಕಾಡಿನಿಂದ ಸಂರಕ್ಷಿತ ಪ್ರದೇಶ ಎಂದು ಊರಿಗೆ ಕಳುಹಿಸುತ್ತದೆ. ಜನರೊಂದಿಗೆ ಕಾಡು ಸೇರುವ ಮುತ್ತರಸನ ವಂಶಸ್ಥನಾದ ಮಡೆನೂರು ಮನು ತನ್ನವರನ್ನು ವಾಪಸ್ ಕಾಡಿಗೆ ಸೇರಿಸಲು ನಡೆಸುವ ಹೋರಾಟದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಕಥೆಯಾಗಿದೆ.
ಚಿತ್ರದಲ್ಲಿ ನಿರ್ದೇಶಕರು ಹಲವು ಶತಮಾನಗಳಿಂದ ಬಂದಿರುವ ಮೇಲು- ಕೀಳು ತಾರತಮ್ಯಕ್ಕೆ ಉತ್ತರ ಕಂಡು ಹಿಡಿಯುವ ಯತ್ನವನ್ನು ಮಾಡಿದ್ದಾರೆ. ಹಳೆಯ ಕಥೆಗೆ ಹೊಸ ತಿರುಗು ನೀಡುವ ಮೂಲಕ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಕೆಲವು ದೃಶ್ಯಗಳು ಪ್ರೇಕ್ಷಕರನ್ನು ಭಾವುಕವಾಗಿ ತಟ್ಟುತ್ತವೆ.
ಚಿತ್ರದಲ್ಲಿ ಮಡೆನೂರು ಮನು ಹೊಡೆದಾಟದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನಟನೆಯಲ್ಲಿ ಅವರಿಗೆ ಸ್ವಲ್ಪ ಪಕ್ವತೆ ಬೇಕಾಗಿತ್ತು ಎಂದು ಅನಿಸುತ್ತದೆ. ನಾಯಕಿಯಾಗಿ ಕಾಣಿಸಿಕೊಂಡಿರುವ ಮೌನ ಗುಡ್ಡೆಮನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ, ಕರಿ ಸುಬ್ಬು, ತಬಲಾ ನಾಣಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮನೋಮೂರ್ತಿ ಸಂಗೀತದ ಹಾಡುಗಳು ಗಮನ ಸೆಳೆಯುತ್ತವೆ.
ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶ ಬೇಕು ಎನ್ನುವವರಿಗೆ ಈ ಚಿತ್ರ ಇಷ್ಟವಾಗಬಹುದು.

Be the first to comment