‘ಮೈಸೂರು ಸ್ಯಾಂಡಲ್ ಸೋಪ್’ಗೆ ಬ್ರ್ಯಾಂಡ್ ಅಂಬಾಸಿಡರ್ ಅಗತ್ಯವಿಲ್ಲ ಎಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ವಸ್ತುವನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಹತ್ತಾರು ದಾರಿಗಳಿರುತ್ತವೆ. ರಾಯಭಾರಿ ನೇಮಕ ಮಾಡಿ ಪ್ರಚಾರ ಮಾಡುವ ಅಗತ್ಯವಿಲ್ಲ. ಇದು ತೆರಿಗೆ ಪಾವತಿದಾರರ ಹಣ ದುರುಪಯೋಗ ಹೊರತು ಏನೂ ಪ್ರಯೋಜನವಿಲ್ಲ ಎಂದಿದ್ದಾರೆ.
ಇಂದು ಸೆಲೆಬ್ರಿಟಿಗಳು ಬಳಸುತ್ತಾರೆ ಎಂಬ ಮಾತ್ರಕ್ಕೆ ಜನರು ವಸ್ತುಗಳನ್ನು ಖರೀದಿಸುವುದಿಲ್ಲ. ನಾವು ಸೋಪ್ ಬಳಸಿದರೆ ನಟಿಯ ರೀತಿ ಆಗುವುದಿಲ್ಲ ಎಂಬುದು ಜನತೆಗೆ ಚೆನ್ನಾಗಿ ಗೊತ್ತಿದೆ. ಜನರು ಅದನ್ನು ಮೆಚ್ಚಿ ಖರೀದಿಸಿ ಬಳಸಬೇಕೆಂದರೆ ವಸ್ತುವಿನ ಗುಣಮಟ್ಟವಿರಬೇಕು. ಆಪಲ್ ಬಹಳ ಯಶಸ್ವಿ ಉದ್ಯಮವಾಗಿ ಬೆಳೆದಿದೆ. ಆದರೆ ಅದಕ್ಕೆ ಸಂಭಾವನೆ ನೀಡಿ ನೇಮಿಸಿದ ಬ್ರಾಂಡ್ ಅಂಬಾಸಿಡರ್ ಇರಲಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಗೆ ದೀರ್ಘ ಇತಿಹಾಸವಿದೆ, ಪರಂಪರೆಯಿದೆ, ಪ್ರತಿ ಕನ್ನಡಿಗರು ಅದರ ರಾಯಭಾರಿಗಳು. ಮೈಸೂರು ಸ್ಯಾಂಡಲ್ ಸೋಪ್ ನ್ನು ಜಗತ್ತಿಗೆ ಪರಿಚಯಿಸಲು ಪ್ರತಿಯೊಬ್ಬರನ್ನೂ ಒಗ್ಗೂಡಿಸಿ. ಅದನ್ನು ಕನ್ನಡಿಗರು ಪ್ರೀತಿಯಿಂದ ಖುಷಿಯಿಂದ ಮಾಡುತ್ತಾರೆ. ಸಂಘಟಿತವಾಗಿ, ಸೃಜನಶೀಲವಾಗಿ ಗ್ರಾಹಕರೊಂದಿಗೆ ಸಂಬಂಧ ಹೊಂದುವುದು ಮುಖ್ಯವಾಗುತ್ತದೆ ಎಂದಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯಾಗಿ 2 ವರ್ಷಗಳ ಅವಧಿಗೆ 6.2 ಕೋಟಿ ರೂಪಾಯಿ ನೀಡಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
—-

Be the first to comment