ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಂಬರುವ ಚಿತ್ರ ‘ಅಮೆರಿಕಾ ಅಮೆರಿಕಾ 2’ ದಲ್ಲಿ ರಮೇಶ್ ಅರವಿಂದ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ಅಮೆರಿಕಾ ಅಮೆರಿಕಾ’ ಚಿತ್ರದಲ್ಲಿ ನಟಿಸಿದ್ದ ರಮೇಶ್ ಅರವಿಂದ್ ಅವರು ಹೊಸ ಚಿತ್ರದಲ್ಲಿ ನಿರೂಪಣಾ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರವು ಹಳೆಯ ಚಿತ್ರಕ್ಕೆ ನೇರ ಸಂಬಂಧ ಹೊಂದಿಲ್ಲದಿದ್ದರೂ ಮೂಲ ಚಿತ್ರದ ವಿಷಯವನ್ನು ಆಧರಿಸಿದೆ.
ಸಹನಾ ವಿಜಯಕುಮಾರ್ ಅವರ ‘ಕ್ಷಮೆ’ ಕಾದಂಬರಿಯಿಂದ ಸ್ಫೂರ್ತಿ ಪಡೆದ ‘ಅಮೆರಿಕಾ ಅಮೆರಿಕಾ 2’ ಚಿತ್ರ ಬೆಂಗಳೂರು ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರೀತಿ, ಹಂಬಲ ಮತ್ತು ಸ್ಥಳಾಂತರದ ಭಾವನಾತ್ಮಕ ವಿಚಾರಗಳನ್ನು ತೆರೆಮೇಲೆ ತರಲಿದೆ. ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ, ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್, ಮಂಡ್ಯ ರಮೇಶ್, ಮಾನಸಿ ಸುಧೀರ್ ಇದ್ದಾರೆ.
ಕೆ ರವೀಂದ್ರ ನಿರ್ಮಿಸಿರುವ ಈ ಚಿತ್ರವು ಪೋಸ್ಟ್-ಪ್ರೊಡಕ್ಷನ್ನ ಅಂತಿಮ ಹಂತದಲ್ಲಿದೆ. ಸದ್ಯ ರೀ-ರೆಕಾರ್ಡಿಂಗ್ ಹಂತದಲ್ಲಿದೆ. ಈ ಮೊದಲು ಚಿತ್ರಕ್ಕೆ ಅಮರ ಮಧುರ ಪ್ರೇಮ ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿತ್ತು.
1997ರಲ್ಲಿ ತೆರೆಕಂಡ ‘ಅಮೆರಿಕಾ ಅಮೆರಿಕಾ’ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರ’ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ಆ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಮನೋ ಮೂರ್ತಿ ಅವರೇ ಅಮೆರಿಕಾ ಅಮೆರಿಕಾ 2 ಚಿತ್ರಕ್ಕೂ ಸಂಗೀತ ಸಂಯೋಜಿಸಲಿದ್ದಾರೆ.

Be the first to comment