ರಾಮಾಚಾರಿ 2.O’ ಚಿತ್ರದ ಮೂಲಕ ಚಂದನವನದಲ್ಲಿ ಗಮನ ಸೆಳೆದ ನಟ ತೇಜ್ ಆರ್. ಇದೀಗ ‘ಡ್ಯೂಡ್’ ಎಂಬ ಕ್ಯಾಚೀ ಟೈಟಲ್ನ ಸಿನಿಮಾದಲ್ಲಿ ನಟನೆ, ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ತೇಜ್ಗೆ ಸವಾಲೊಂದು ಎದುರಾಗಿದೆ.
ಹೌದು, ತೇಜ್ ಹೇಳುವ ಹಾಗೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ‘ಡ್ಯೂಡ್’ ಎಂಬ ತಮ್ಮ ಚಿತ್ರದ ಟೈಟಲ್ ಅನ್ನು ಒಂದು ವರ್ಷದ ಹಿಂದೆಯೇ ಕರ್ನಾಟಕ ಚಲನಚಿತ್ರ ಛೇಂಬರ್‌ನಲ್ಲಿ ನೋಂದಾಯಿಸಿ ಘೋಷಿಸಿದ್ದಾರೆ. ಆದ್ರೀಗ, ತೆಲುಗು ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ‘ಡ್ಯೂಡ್’ ಹೆಸರಿನಡಿ ಹೊಸ ಸಿನಿಮಾ ಅನೌನ್ಸ್ ಮಾಡಿರೋದು ಆಘಾತ ತಂದಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ತಮ್ಮ ಡ್ಯೂಡ್ ಚಿತ್ರವನ್ನು ಪ್ರಚಾರ ಮಾಡುತ್ತಿದ್ದೇವೆ ಎಂದು ತೇಜ್ ತಿಳಿಸಿದ್ದಾರೆ.
‘ಮೈತ್ರಿ’ಯಂತಹ ಉನ್ನತ ಮಟ್ಟದ ನಿರ್ಮಾಣ ಸಂಸ್ಥೆಯ ವಿರುದ್ಧ ಹೋರಾಡುವ ಉದ್ದೇಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಈ ಗೊಂದಲಗಳನ್ನು ನಿವಾರಿಸಲು ನಾವು ಮೈತ್ರಿ ಮೂವಿ ಮೇಕರ್ಸ್‌ನ ಕಾರ್ಯನಿರ್ವಾಹಕ ನಿರ್ಮಾಪಕ ಅನಿಲ್ ಅವರ ಗಮನಕ್ಕೆ ತಂದಿದ್ದೇವೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು.
ತೇಜ್ ಅವರು ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿರುವ ಡ್ಯೂಡ್ ಚಿತ್ರವನ್ನು ನಿರ್ದೇಶಿಸಿ, ನಟಿಸುತ್ತಿದ್ದಾರೆ. ಫುಟ್ಬಾಲ್ ಸುತ್ತ ಕೇಂದ್ರೀಕೃತವಾಗಿರುವ ಮತ್ತು ಆಳ ಭಾವನೆಗಳಿಂದ ಕೂಡಿದ ಈ ಚಿತ್ರವು, ಉತ್ಸಾಹಿ ಫುಟ್ಬಾಲ್ ಪ್ರೇಮಿ, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಸಮರ್ಪಿತವಾಗಿದೆ.
ಹಿರಿಯ ನಟ ರಂಗಾಯಣ ರಘು ಫುಟ್ಬಾಲ್ ತರಬೇತುದಾರನಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರವು ಶೀಘ್ರದಲ್ಲೇ ಅಂತಿಮ ವೇಳಾಪಟ್ಟಿಯನ್ನು ಪ್ರವೇಶಿಸಲಿದೆ. ಪೋಸ್ಟ್-ಪ್ರೊಡಕ್ಷನ್ ಕೂಡಾ ಏಕಕಾಲದಲ್ಲಿ ಪ್ರಗತಿಯಲ್ಲಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲು ಯೋಜನೆಗಳು ಜಾರಿಯಲ್ಲಿವೆ.
ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿರುವ ರಾಘವೇಂದ್ರ ರಾಜ್‌ಕುಮಾರ್ ಅವರು ಈ ಯೋಜನೆಗೆ ಸ್ಕ್ರಿಪ್ಟ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸನ್ಯಾ ಕಾವೇರಮ್ಮ, ಮೇಘಾ, ಮೋಹಿತ್, ಧೃತಿ, ಅನರ್ಘ್ಯ, ದಿಪಾಲಿ ಪಾಂಡೆ, ಸಿರಿ, ಇವಾಂಜೆಲಿನ್, ಸೋನು ತೀರ್ಥ ಗೌಡ್, ಯಶಸ್ವಿನಿ, ಮರ್ಸಿ ಮತ್ತು ಮೋನಿಶ್ ಅವರಿಂದ ಚಿತ್ರಿಸಿದ ಮಹಿಳಾ ಫುಟ್‌ಬಾಲ್ ಆಟಗಾರರ ಪ್ರಬಲ ಸಮೂಹವನ್ನು ಒಳಗೊಂಡಿದೆ. ಇತರೆ ಪ್ರಮುಖ ಪಾತ್ರಗಳನ್ನು ಸುಂದರ್ ರಾಜ, ಸ್ಪರ್ಶ ರೇಖಾ ಮತ್ತು ವಿಜಯ್ ಚೆಂಡೂರ್ ನಿರ್ವಹಿಸಿದ್ದಾರೆ.
ಪನರೋಮಿಕ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಜಿಂಕೆಮರಿ ಖ್ಯಾತಿಯ ಎಮಿಲ್ ಮೊಹಮ್ಮದ್ ಸಂಗೀತ ಸಂಯೋಜಿಸುತ್ತಿದ್ದು, ಪ್ರೇಮ್ ಛಾಯಾಗ್ರಹಣ ನಿಭಾಯಿಸುತ್ತಿದ್ದಾರೆ.

Be the first to comment