ನಟ ಧರ್ಮ ಕೀರ್ತಿರಾಜ್ ‘ಸಿಂಧೂರಿ’ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ತೆರೆ ಮೇಲೆ ಮುಖಾಮುಖಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ‘ಸಿಂಧೂರಿ’ ಸಿನಿಮಾಗೆ ಮುಹೂರ್ತ ಸಮಾರಂಭ ನೆರವೇರಿಸಲಾಗಿದೆ. ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ಬರೆದು ನಿರ್ದೇಶಿಸಿದ್ದು, ಎಸ್ ರಮೇಶ್ ಬಂಡವಾಳ ಹೂಡಿದ್ದಾರೆ.
‘ಸಿಂಧೂರಿಯಲ್ಲಿ ನಾನು ಎರಡು ಛಾಯೆಗಳಲ್ಲಿ ನಟಿಸಿದ್ದೇನೆ. ಒಂದು ನಾಯಕನಾಗಿ ಮತ್ತು ಇನ್ನೊಂದು ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ರಾಗಿಣಿ ದ್ವಿವೇದಿ ಅವರೊಂದಿಗಿನ ಘರ್ಷಣೆ ಆಸಕ್ತಿದಾಯಕವಾಗಿರುತ್ತದೆ. ನನ್ನ ಪ್ರೇಯಸಿಯಾಗಿ ನಟಿಸುವ ಮತ್ತೊಬ್ಬ ನಾಯಕಿ ಕೂಡ ಇದ್ದಾರೆ. ಆದರೆ ಆ ಪಾತ್ರವನ್ನು ಇನ್ನೂ ಅಂತಿಮಗೊಳಿಸಿಲ್ಲ’ ಎಂದು ಧರ್ಮ ಹೇಳಿದ್ದಾರೆ.
ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಹಾಗೂ ಧರ್ಮ ಕೀರ್ತಿರಾಜ್ ಜೋಡಿಯಾಗಿ ಅಭಿನಯಿಸುತ್ತಿಲ್ಲ. ಸಿನಿಮಾದ ಕಥೆಗೆ ತಿರುವು ನೀಡುವ ಪಾತ್ರದಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ.
‘ಶೀರ್ಷಿಕೆ ಕೇಳಿದರೆ ಇದು ರೋಹಿಣಿ ಸಿಂಧೂರಿ ಹಾಗೂ ಡಿ.ಕೆ. ರವಿ ಅವರ ಕಥೆಯಿರಬಹುದಾ ಎಂದು ಅನೇಕರು ನಮ್ಮ ಬಳಿ ಕೇಳಿದ್ದಾರೆ. ಆದರೆ ರೋಹಿಣಿ ಸಿಂಧೂರಿ ಅವರಿಗೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಇದೊಂದು ಕಾಲ್ಪನಿಕ ಮರ್ಡರ್ ಮಿಸ್ಟ್ರಿ ಕಥೆ ’ ಎಂದು ನಿರ್ದೇಶಕ ಶಂಕರ್ ಅವರು ತಿಳಿಸಿದ್ದಾರೆ.
ನಿರ್ದೇಶಕರು 1990ರ ದಶಕದ ಶೈಲಿಯ ನಿರೂಪಣೆ ಮತ್ತು ಹಿನ್ನೆಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಚಿತ್ರಕ್ಕೆ ಹಿಂದಿನ ಶೈಲಿಯ ವಿನ್ಯಾಸವನ್ನು ನೀಡಿದೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಒಂದೇ ಹಂತದಲ್ಲಿ ಸಕಲೇಶಪುರದಲ್ಲಿ ನಡೆಯಲಿದೆ.
ಧರ್ಮ ಕೀರ್ತಿರಾಜ್ ಮುಂಬರುವ ಚಿತ್ರಗಳಾದ ಟಕೀಲಾ, ಅಮರಾವತಿ ಪೊಲೀಸ್ ಸ್ಟೇಷನ್ ಮತ್ತು ಬ್ಲಡ್ ರೋಸಸ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ನಿರ್ದೇಶಕ ಪುನೀತ್ ಕೆಜಿಆರ್ ಅವರ ‘ನಯನ ಮಧುರ’ ಚಿತ್ರದಲ್ಲಿಯೂ ಧರ್ಮ ನಟಿಸಲಿದ್ದಾರೆ. ಚಿತ್ರದ ಅಧಿಕೃತ ಘೋಷಣೆ ಶೀಘ್ರದಲ್ಲೇ ನಡೆಯಲಿದೆ.

Be the first to comment