ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಈ ಸಂಸ್ಥೆಯ ಪ್ರಚಾರಕ್ಕಾಗಿ ಮಹೇಶ್ ಬಾಬು ಅವರು 3.4 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.
ಮಹೇಶ್ ಬಾಬು ಜಾಹಿರಾತು ಒಪ್ಪಂದಕ್ಕಾಗಿ 5.9 ಕೋಟಿ ರೂ.ಗಳನ್ನು ಪಡೆದಿದ್ದು, ಈ ಪೈಕಿ ಚೆಕ್ ಮೂಲಕ 3.4 ಕೋಟಿ ರೂ.ಗಳು ಮತ್ತು ನಗದು ಮೂಲಕ 2.5 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಈಗ ನಗದು ಪಾವತಿ ಇಡಿ ಪರಿಶೀಲನೆಗೆ ಒಳಪಟ್ಟಿದೆ.
ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಈ ಜಾಹಿರಾತು ವಿಚಾರವಾಗಿ ಮಹೇಶ್ ಬಾಬು ಅವರಿಗೆ ಸಂಕಷ್ಟ ಎದುರಾಗಿದೆ.
ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಸಂಸ್ಥೆಗಳ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ತೆಲಂಗಾಣ ಪೊಲೀಸರು ಭಾಗ್ಯನಗರ ಪ್ರಾಪರ್ಟೀಸ್ ಲಿಮಿಟೆಡ್ನ ನರೇಂದ್ರ ಸುರಾನ ಮತ್ತು ಸಾಯಿ ಸೂರ್ಯ ಡೆವಲಪರ್ಸ್ನ ಸತೀಶ್ ಚಂದ್ರ ಗುಪ್ತಾ ವಿರುದ್ಧ ಹಲವು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಅನಧಿಕೃತ ಲೇಔಟ್ಗಳಲ್ಲಿ ಪ್ಲಾಟ್ಗಳನ್ನು ಮಾರಾಟ ಮಾಡುವ ಮೂಲಕ ಒಂದೇ ಪ್ಲಾಟ್ಗಳನ್ನು ಹಲವು ಬಾರಿ ಮರುಮಾರಾಟ ಮಾಡಿದ ಮತ್ತು ಸುಳ್ಳು ನೋಂದಣಿ ಮೂಲಕ ಖರೀದಿದಾರರನ್ನು ವಂಚಿಸಿದ ಆರೋಪವಿದೆ.
—-

Be the first to comment