‘ಒಲವಿನ ನಿಲ್ದಾಣ’ ಸೀರಿಯಲ್ ನಿರ್ದೇಶಕ ರಮೇಶ್ ಇಂದಿರಾ, ಕನ್ನಡದ ದೊಡ್ಡ ಮಟ್ಟದ ವೆಬ್ ಸೀರೀಸ್ ‘ಅಯ್ಯನ ಮನೆ’ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಶ್ರುತಿ ನಾಯ್ಡು ಪ್ರೊಡಕ್ಷನ್ ನಿರ್ಮಾಣದಲ್ಲಿ ಹೊಸ ಮಿನಿ ವೆಬ್ ಸರಣಿ ಆರಂಭವಾಗಲು ಸಜ್ಜಾಗಿದೆ. ಭಾರತೀಯ ಚಿತ್ರರಂಗದ ಹೆಸರಾಂತ ಒಟಿಟಿ ಫ್ಲಾರ್ಟ್ ಫಾರಂಗಳಲ್ಲೊಂದಾದ ಜೀ5 ಪ್ರಸಾರ ಮಾಡಲಿದೆ. ನಿರ್ದೇಶಕ ರಮೇಶ್ ಇಂದಿರಾ, ಪ್ರತಿ ಮನೆಯೂ ಸ್ವರ್ಗವಾಗಿರುವುದಿಲ್ಲ. ಅಲ್ಲಿ ಸಾಕಷ್ಟು ಮುಚ್ಚಿಟ್ಟ ವಿಷಯಗಳಿರುತ್ತವೆ ಎಂಬುದನ್ನು ‘ಅಯ್ಯನ ಮನೆ’ ಸರಣಿಯಲ್ಲಿ ಹೇಳಲು ಹೊರಟಿದ್ದಾರೆ .
7 ಸಂಚಿಕೆ ಹೊಂದಿರುವ ಈ ವೆಬ್ ಸರಣಿಯಲ್ಲಿ ‘ದಿಯಾ’ ಸಿನಿಮಾ ನಟಿ ಖುಷಿ ರವಿ, ಅಕ್ಷಯ್ ನಾಯಕ್, ‘ಕಾಂತಾರ’ ನಟಿ ಮಾನಸಿ ಸುಧೀರ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಇದು ಭಯ, ನಂಬಿಕೆ ಮತ್ತು ವಿಧಿ ಸಂಘರ್ಷಿಸುವ ಕಥೆಯನ್ನು ಒಳಗೊಂಡಿದೆ.
ಚಿಕ್ಕಮಗಳೂರಿನ ಅಯ್ಯನ ಮನೆ ಎಂಬ ಕುಟುಂಬದಲ್ಲಿ ಹುದುಗಿ ಹೋಗಿರುವ ಸತ್ಯಗಳ ಸುತ್ತ ಈ ಸಿನಿಮಾ ಕಥೆ ಸಾಗಲಿದೆ. ಏಪ್ರಿಲ್ 25ರಿಂದ ಜೀ5 ಒಟಿಟಿಯಲ್ಲಿ ‘ಅಯ್ಯನ ಮನೆ’ ವೆಬ್ ಸರಣಿ ವೀಕ್ಷಣೆಗೆ ಲಭ್ಯವಿದೆ.
“ಅಯ್ಯನ ಮನೆ ರೋಚಕತೆ ಜೊತೆಗೆ ಭಯ, ನಂಬಿಕೆ, ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಇದೊಂದು ಮಿಸ್ಟರಿ ಕಥೆಯಾಗಿದೆ. ಪ್ರೇಕ್ಷಕರನ್ನು ಪ್ರತಿ ಕ್ಷಣವೂ ಎಕ್ಸೈಟ್ ಆಗುವಂತೆ ಮಾಡುತ್ತದೆ. ಈ ವೆಬ್ ಸರಣಿ ಕರ್ನಾಟಕ ಸಂಸ್ಕೃತಿ, ಸಂಪ್ರದಾಯವನ್ನು ಅನಾವರಣ ಮಾಡುತ್ತದೆ” ಎನ್ನುತ್ತಾರೆ ನಿರ್ದೇಶಕ ರಮೇಶ್ ಇಂದಿರಾ.
ಸಂಪ್ರದಾಯಕ್ಕೆ ತಕ್ಕಂತೆ ನಡೆದುಕೊಳ್ಳುವ ಮುಗ್ಧ ಹೆಣ್ಣು ಮಗಳ ಜಾಜಿ ಎಂಬ ಪಾತ್ರ ನಟಿ ಖುಷಿ ರವಿಗಿದೆ.

Be the first to comment