ತಮಿಳು ಚಲನಚಿತ್ರ ನಟ ಮತ್ತು ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ವಿಜಯ್ ವಿರುದ್ಧ ಉತ್ತರ ಪ್ರದೇಶದ ಬರೇಲ್ವಿ ಧರ್ಮಗುರು, ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಫತ್ವಾ ಹೊರಡಿಸಿದ್ದಾರೆ.
ವಿಜಯ್ ಇಸ್ಲಾಂ ವಿರೋಧಿ. ತಮಿಳುನಾಡಿನ ಮುಸ್ಲಿಮರು ವಿಜಯ್ ಅವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮೌಲಾನಾ ಸೂಚಿಸಿ ಫತ್ವಾ ಹೊರಡಿಸಿದ್ದಾರೆ. ನಟನ ಹಿನ್ನೆಲೆ ಮತ್ತು ಇತಿಹಾಸ ಇಸ್ಲಾಂ ವಿರೋಧಿಯಾಗಿದೆ. ರೋಜಾ ಇಫ್ತಾರ್ ಸಮಯದಲ್ಲಿ ಕುಡುಕರು, ಜೂಜುಕೋರರು ಮತ್ತು ಸಮಾಜ ವಿರೋಧಿಗಳನ್ನು ಆಹ್ವಾನಿಸುವುದು ಕಾನೂನುಬಾಹಿರ ಮತ್ತು ಪಾಪ ಕೃತ್ಯ. ತಮಿಳುನಾಡಿನ ಮುಸ್ಲಿಮರೇ ಅಂತಹ ವ್ಯಕ್ತಿಯನ್ನು ನಂಬಬೇಡಿ. ಅವರನ್ನು ತಮ್ಮ ಕಾರ್ಯಕ್ರಮಗಳಿಗೂ ಆಹ್ವಾನಿಸಬೇಡಿ ಎಂದು ಫತ್ವಾದಲ್ಲಿ ಕೇಳಿಕೊಂಡಿದ್ದಾರೆ.
‘ದಿ ಬೀಸ್ಟ್’ ಚಿತ್ರದಲ್ಲಿ, ಮುಸ್ಲಿಮರು ಮತ್ತು ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದನೆ ಮತ್ತು ಉಗ್ರವಾದದೊಂದಿಗೆ ಜೋಡಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮುಸ್ಲಿಮರನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಈಗ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದರಿಂದ ಮತ್ತು ಅವರಿಗೆ ಮುಸ್ಲಿಂ ಮತಗಳು ಬೇಕಾಗಿರುವುದರಿಂದ ಮುಸ್ಲಿಂ ತುಷ್ಟೀಕರಣವನ್ನು ಮಾಡುತ್ತಿದ್ದಾರೆ. ಅವರು ಇಸ್ಲಾಂ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಚಲನಚಿತ್ರಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
—-

Be the first to comment