ಏಪ್ರಿಲ್ 10 ರಂದು ಬಿಡುಗಡೆ ಆಗುತ್ತಿರುವ ವಿದ್ಯಾಪತಿ ಚಿತ್ರದಲ್ಲಿ ಕಾಮಿಡಿ ಜೊತೆಗೆ ಆಕ್ಷನ್ ಇದೆ ಎಂದು ಚಿತ್ರದ ನಾಯಕ ನಾಗಭೂಷಣ್ ಹೇಳಿದ್ದಾರೆ.
ವಿದ್ಯಾಪತಿ ಚಿತ್ರದ ಮೂಲಕ ನಾಗಭೂಷಣ್ ಇಕ್ಕಟ್ ನಿರ್ದೇಶಕರ ಜೊತೆಗೆ ಮತ್ತೆ ಕೈಜೋಡಿಸಿದ್ದಾರೆ. ಚಿತ್ರದ ಗೆಲುವಿನ ನಿರೀಕ್ಷೆಯಲ್ಲಿ ಅವರು ಇದ್ದಾರೆ.
ವಿದ್ಯಾಪತಿಯಲ್ಲಿ ಆಕ್ಷನ್ ಹಾಗೂ ಅದ್ದೂರಿ ತನದ ಕಾರಣ ಇಕ್ಕಟ್ ಚಿತ್ರಕ್ಕಿಂತ 30 -40 ಪಟ್ಟಿನಷ್ಟು ಹೆಚ್ಚು ಬಜೆಟ್ ಆಗಿದೆ. ವಿದ್ಯಾಪತಿ ಗೆಲ್ಲಲಿದೆ ಎಂದು ನಾಗಭೂಷಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದಿನ ಕನ್ನಡ ಚಿತ್ರರಂಗದ ಸ್ಥಿತಿಯಲ್ಲಿ ಧನಂಜಯ ಅವರು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. ಟಗರುಪಲ್ಯ ಟಿವಿಯಲ್ಲಿ ಹಿಟ್ ಆಯಿತು. ಆದರೆ ಇಂದು ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ವಹಿವಾಟು ಆಗುತ್ತಿಲ್ಲ. ಧನಂಜಯ ಅವರು ಧೈರ್ಯದಿಂದ ಹೆಜ್ಜೆ ಇಡುತ್ತಿದ್ದಾರೆ. ಜನರಿಗೆ ಚಿತ್ರ ತಲುಪಿಸುವ ಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ನಮ್ಮ ಚಿತ್ರರಂಗದಲ್ಲಿ ಕಾಮಿಡಿ ಜಾನರ್ ಸಿನಿಮಾಗಳ ಕೊರತೆ ಕಂಡು ಬರುತ್ತಿದೆ. ಹಿಂದೆ ಸ್ಟಾರ್ ಗಳು ಕಾಮಿಡಿ ಚಿತ್ರ ಮಾಡುತ್ತಿದ್ದರು. ಈಗ ಯಾರು ಇದಕ್ಕೆ ಕೈ ಹಾಕುತ್ತಿಲ್ಲ. ಕಾಮಿಡಿ ಚಿತ್ರಗಳು ಕಡಿಮೆಯಾದ ಕಾರಣ ಕನ್ನಡ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್ ಕಡಿಮೆ ಆಗಿದ್ದಾರೆ. ಇಡೀ ಕುಟುಂಬ ಕುಳಿತು ನೋಡುವ ಸಿನಿಮಾ ಬಂದರೆ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳಿಗೆ ಬರುತ್ತಾರೆ. ಇದಕ್ಕೆ ಟಗರುಪಲ್ಯ ಉತ್ತಮ ಉದಾಹರಣೆ ಎಂದು ನಾಗಭೂಷಣ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಸ್ಟಾರ್ ವ್ಯಾಲ್ಯೂ, ದೊಡ್ಡ ಬಜೆಟಿನ ಹಿಂದೆ ಬಿದ್ದಿದ್ದಾರೆ. ಆದರೆ ಸಣ್ಣ ಬಜೆಟ್ ಮತ್ತು ಮಧ್ಯಮ ಬಜೆಟ್ ನ ಚಿತ್ರಗಳ ಯಶಸ್ಸಿನಲ್ಲಿ ಚಿತ್ರರಂಗದ ಯಶಸ್ಸು ಅಡಗಿದೆ. ಇದಕ್ಕೆ ಮಲಯಾಳಂ ಚಿತ್ರರಂಗ ಉತ್ತಮ ಉದಾಹರಣೆಯಾಗಿದೆ. ಈ ನಿಟ್ಟಿನಲ್ಲಿ ನಿರ್ಮಾಪಕರು ಗಮನ ಹರಿಸಬೇಕಿದೆ ಎಂದು ನಾಗಭೂಷಣ್ ಹೇಳಿದ್ದಾರೆ.
___

Be the first to comment