ಎಂ.ಎಲ್. ಪ್ರಸನ್ನ ನಿರ್ದೇಶನದ ‘ಭಾರತಿ ಟೀಚರ್ ಏಳನೇ ತರಗತಿ’ ಚಿತ್ರದಲ್ಲಿ ಸಚಿವ ಸಂತೋಷ್ ಲಾಡ್ ಅವರು ಜಿಲ್ಲಾಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಘವೇಂದ್ರ ರೆಡ್ಡಿ ನಿರ್ಮಾಣದ ಕನ್ನಡ ಪ್ರೇಮ ಸಾರುವ ‘ಭಾರತಿ ಟೀಚರ್ ಏಳನೇ ತರಗತಿ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸಿಹಿ ಕಹಿ ಚಂದ್ರು, ಕು.ಯಶಿಕಾ, ಗೋವಿಂದೇ ಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್, ಬೆನಕ ನಂಜಪ್ಪ, ರೋಹಿತ್ ರಾಘವೇಂದ್ರ, ಸೌಜನ್ಯ ಸುನಿಲ್ ತಾರಾಗಣದಲ್ಲಿದ್ದಾರೆ.
ಸಂತೋಷ್ ಲಾಡ್ ಅವರು, ‘ಚಿತ್ರದ ಕತೆ ಇಷ್ಟವಾಯಿತು. ನನಗೆ ಡಿಸಿ ಪಾತ್ರ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆಯ ಜತೆ ಭಯ ಕೂಡ ಇದೆ. ಇದು ಒಂದು ಉತ್ತಮ ಸಂದೇಶ ಇರುವ ಸಿನಿಮಾ ಆದ್ದರಿಂದ ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ. ಈಗಿನ ಕಾಲದಲ್ಲಿ ಸಿನಿಮಾಗಳು ಗೆಲ್ಲುವುದು ಬಹಳ ಕಷ್ಟಕರವಾಗಿದೆ. ಕನ್ನಡ ಸಿನಿಮಾಗಳು ಹೆಚ್ಚು ಬೆಳೆಯಲಿ’ ಎಂದು ಹೇಳಿದ್ದಾರೆ.
ಎಂ.ಎಲ್. ಪ್ರಸನ್ನ ಅವರು, ‘ಸಂತೋಷ್ ಸರ್ ನಮ್ಮ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿದ್ದು ಸಂತೋಷ ತಂದಿದೆ. ಇದಕ್ಕೆ ಅನುವು ಮಾಡಿಕೊಟ್ಟಿದ್ದು ಡಾ.ವಿ.ನಾಗೇಂದ್ರ ಪ್ರಸಾದ್. ಈ ತಲೆಮಾರಿನ ಮಕ್ಕಳಲ್ಲಿ ಕನ್ನಡ ಕಲಿಯುವ ಮತ್ತು ಕಲಿಸುವ ಕಿಚ್ಚನ್ನು ಹುಟ್ಟು ಹಾಕಬೇಕು ಎಂಬ ಉದ್ದೇಶದ ಸಿನಿಮಾ ಇದು’ ಎಂದಿದ್ದಾರೆ.
—

Be the first to comment