ಮಲಯಾಳಂ ನಟ ಮಮ್ಮುಟ್ಟಿ ಅವರ ಆರೋಗ್ಯ ಸುಧಾರಣೆಗಾಗಿ ಸೂಪರ್ಸ್ಟಾರ್ ಮೋಹನ್ ಲಾಲ್, ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ವಿವಾದ ಭುಗಿಲೆದ್ದಿದೆ.
ತಮ್ಮ ‘ಎಲ್ 2: ಎಂಪುರಾನ್’ ಚಿತ್ರದ ಪ್ರಚಾರದಲ್ಲಿರುವ ಮೋಹನ್ ಲಾಲ್, ಮಾರ್ಚ್ 18 ರಂದು ಪ್ರಾರ್ಥನೆ ಸಲ್ಲಿಸಲು ಶಬರಿಮಲೆಗೆ ಹೋಗಿದ್ದರು. “ಉಷಾ ಪೂಜೆ”ಯ ಸಮಯದಲ್ಲಿ ಅವರು ಮಮ್ಮುಟ್ಟಿ ಅವರ ಜನ್ಮ ಹೆಸರು ಮುಹಮ್ಮದ್ ಕುಟ್ಟಿ ಮತ್ತು ಅವರ ಜನ್ಮ ನಕ್ಷತ್ರ ‘ವಿಶಾಖಂ’ ನ್ನು ಉಲ್ಲೇಖಿಸಿ ಅರ್ಚಕರಿಗೆ ಟಿಪ್ಪಣಿ ನೀಡಿದ್ದರು.
ದೇವಸ್ವಂ ಕಚೇರಿಯಿಂದ ಮೇಲಿನದನ್ನು ಉಲ್ಲೇಖಿಸಿ ನೀಡಲಾದ ರಶೀದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವಿವಾದ ಭುಗಿಲೆದ್ದಿದೆ. ಒಂದು ವರ್ಗದ ಬಳಕೆದಾರರು ಇದನ್ನು ಕೋಮು ಸಾಮರಸ್ಯದ ಉದಾಹರಣೆ ಎಂದು ಶ್ಲಾಘಿಸಿದ್ದಾರೆ. ಮತ್ತೊಂದು ವರ್ಗದವರು ಹಿಂದೂ ಪ್ರಾರ್ಥನೆಗಳು ಇಸ್ಲಾಮಿಕ್ ನಂಬಿಕೆಗಳನ್ನು ಉಲ್ಲಂಘಿಸಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಧ್ಯಮಮ್’ ಪತ್ರಿಕೆಯ ಮಾಜಿ ಸಂಪಾದಕ ಓ ಅಬ್ದುಲ್ಲಾ, ಮಮ್ಮುಟ್ಟಿ ಅವರು ಪ್ರಾರ್ಥನೆ ಸಲ್ಲಿಸಲು ಮೋಹನ್ ಲಾಲ್ ಬಳಿ ಕೇಳಿಕೊಂಡಿದ್ದರೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ಯಾರಾದರೂ ಅಲ್ಲಾಹನನ್ನು ಮಾತ್ರ ಪ್ರಾರ್ಥಿಸಬೇಕು ಎಂದು ಇಸ್ಲಾಮಿಕ್ ಕಾನೂನುಗಳನ್ನು ಉಲ್ಲೇಖಿಸಿದ್ದಾರೆ.
ಚಲನಚಿತ್ರ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್, ಅವರಿಬ್ಬರೂ ಈ ರೀತಿ ಮಾಡಿರುವುದು ಇದೇ ಮೊದಲಲ್ಲ. ಈ ಬಾರಿ ಅದು ಸುದ್ದಿಯಾಗಿದೆ ಎಂದು ಹೇಳಿದ್ದಾರೆ.
ಮೋಹನ್ ಲಾಲ್ ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಶಬರಿಮಲೆಯಲ್ಲಿ ಪೂಜೆಗೆ ಮಮ್ಮುಟ್ಟಿ ಅವರ ಹೆಸರು ಮತ್ತು ನಕ್ಷತ್ರವನ್ನು ತಮ್ಮ ಕುಟುಂಬದವರ ಜೊತೆಗೆ ನೀಡಿದ್ದೇನೆ. ದುರದೃಷ್ಟವಶಾತ್ ಅದು ಹೊರಬಂದಿತು. ಮಮ್ಮುಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಚಿಂತೆಯಿಲ್ಲ ಎಂದು ಹೇಳಿದ್ದಾರೆ.
ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಯೊಬ್ಬರು ರಶೀದಿ ಸೋರಿಕೆ ಮಾಡಿರಬಹುದು ಎಂದು ಮೋಹನ್ ಲಾಲ್ ಹೇಳಿದ್ದಾರೆ. ತಿರುವಾಂಕೂರು ಮಂಡಳಿ ಮೋಹನ್ ಲಾಲ್ ಹೇಳಿಕೆಯನ್ನು ಅಲ್ಲಗಳೆದಿದೆ. ಸೋರಿಕೆಯಾದ ರಶೀದಿ ಭಕ್ತರ ಪ್ರತಿಯಿಂದ ಬಂದಿದೆ. ಅಧಿಕಾರಿ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
—-

Be the first to comment