ಕಲ್ಕಿ ಅಗಸ್ತ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ‘ಅರಿಂದಮ್ ‘ ಚಿತ್ರದ ಎರಡು ಲಿರಿಕಲ್ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ತನ್ನ ವಯಸಿಗೆ ಮೀರಿದಂಥ ನಡವಳಿಕೆ, ಬುದ್ದಿಶಕ್ತಿ ಹೊಂದಿದ ಯುವಕನ ಜೀವನದಲ್ಲಿ ದುಷ್ಟಶಕ್ತಿಗಳ ವಿರುದ್ದ ನಡೆಯುವ ಹೋರಾಟ ಹಾಗೂ ಪ್ರೀತಿ, ಪ್ರೇಮದ ಸುತ್ತ ನಡೆಯುವ ಘಟನೆಗಳೇ ಅರಿಂದಮ್ ಚಿತ್ರದ ಕಥೆ.
ಉತ್ಸಾಹಿ ಯುವಕರೆಲ್ಲ ಸೇರಿ ಒಂದು ಸದಭಿರುಚಿಯ ಸಿನಿಮಾ ಮಾಡಿದ್ದೇವೆ. ಕಾಳಿ ಎಂಬ ಯುವಕನ ಜೀವನದ ಏಳು ಬೀಳುಗಳು, ಪ್ರೀತಿ ಪ್ರೇಮದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಇದು 2008ರಲ್ಲಿ ನಡೆಯುವ ಕಥೆ. ಅರಿ ಅಂದ್ರೆ ಶತೃ ದಮ್ ಅಂದ್ರೆ ನಾಶ ಮಾಡುವವನು ಶಿವ, ವಿಷ್ಣುವಿನ ಪ್ರತಿರೂಪ ಎಂದರ್ಥ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಸದ್ಯದಲ್ಲೇ ಡ್ಯುಯೆಟ್ ಹಾಡನ್ನು ರಿಲೀಸ್ ಮಾಡುತ್ತೇವೆ ಎಂದು ಚಿತ್ರದ ನಾಯಕ ಕಲ್ಕಿ ಅಗಸ್ತ್ಯ ವಿವರಿಸಿದ್ದಾರೆ.
ಚಿತ್ರದ ನಾಯಕಿ ಶ್ವೇತಾ ಭಟ್, ನಾನು ಮೊದಲಬಾರಿಗೆ ಬಣ್ಣ ಹಚ್ಚಿದ ಚಿತ್ರ. ಈ ಸಿನಿಮಾದಲ್ಲಿ ನನ್ನದು ಒಬ್ಬ ಇನ್ನೋಸೆಂಟ್ ಹುಡುಗಿಯ ಪಾತ್ರ. ಆಕೆ ತನ್ನ ಜೀವನದಲ್ಲಿ ಯಾವ ರೀತಿಯ ಸಂದರ್ಭಗಳನ್ನು ಎದುರಿಸುತ್ತಾಳೆ ಎಂದು ಚಿತ್ರದಲ್ಲಿ ಹೇಳಲಾಗಿದೆ. ದಾಂಡೇಲಿಯಲ್ಲಿ ಎರಡು ತಿಂಗಳ ಕಾಲ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.
ರಮಣ್, ಪ್ರವೀಣ್, ವಿನೋದ್ ಮುಂತಾದವರು ತಮ್ಮ ಪಾತ್ರಗಳ ಕುರಿತಂತೆ ಮಾತನಾಡಿದರು. ಕಯಾಜ್ ಅವರ ಛಾಯಾಗ್ರಹಣ, ಸುಬ್ಬು ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.

Be the first to comment