ನಟ ಪುನೀತ್ ರಾಜ್ಕುಮಾರ್ 50ನೇ ಜನ್ಮದಿನವನ್ನು ರಾಜ್ಯಾದ್ಯಂತ ಅಭಿಮಾನಿಗಳು ಇಂದು ವಿಶೇಷವಾಗಿ ಆಚರಿಸುತ್ತಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ಇಂದು ಬೆಳಗ್ಗೆ ಅವರ ಪತ್ನಿ ಅಶ್ವಿನಿ, ಮಕ್ಕಳು, ಕುಟುಂಬಸ್ಥರು, ಅಭಿಮಾನಿಗಳು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಂಠೀರವ ಸ್ಟುಡಿಯೊ ಬಳಿ ನಂತರ ಅನ್ನದಾನ, ರಕ್ತದಾನ ಕಾರ್ಯಕ್ರಮ ನೆರವೇರಲಿದೆ. ಪುನೀತ್ ರಾಜ್ಕುಮಾರ್ ಜನ್ಮದಿನ ಹೆಸರಿನಲ್ಲಿ ರಾಜ್ಯಾದ್ಯಂತ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ.
ಪುನೀತ್ ರಾಜ್ಕುಮಾರ್ ತೀವ್ರ ಹೃದಯಾಘಾತದಿಂದ ಅಕ್ಟೋಬರ್ 29, 2021 ರಂದು ನಿಧನರಾದರು. ಪುನೀತ್ ಇಲ್ಲದಿದ್ದರೂ ಅವರ ಅಭಿಮಾನಿಗಳು ಅವರನ್ನು ಸ್ಮರಿಸುವುದೇನು ಕಡಿಮೆಯಾಗಿಲ್ಲ.
ಪುನೀತ್ ರಾಜ್ ಕುಮಾರ್ ನಿಧನ ನಂತರ ಅವರು ಮಾಡಿದ್ದ ಸಮಾಜ ಮುಖಿ ಕೆಲಸಗಳು ಸುದ್ದಿ ಮಾಡಿದವು. ಇದನ್ನು ಪರಿಗಣಿಸಿ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ದಿನವನ್ನು ಕರ್ನಾಟಕದಲ್ಲಿ ಸ್ಫೂರ್ತಿ ದಿನ ಎಂದು ಘೋಷಿಸಿತು.
ಪುನೀತ್ 50ನೇ ವರ್ಷದ ಹುಟ್ಟುಹಬ್ಬ ಆದ್ದರಿಂದ ಅವರು ನಾಯಕ ನಟನಾಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’ ಕಳೆದ ಶುಕ್ರವಾರ ಮರು ಬಿಡುಗಡೆಯಾಗಿದ್ದು ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆ ಮೂಲಕ ಅಪ್ಪು ಮೇಲಿನ ಅಭಿಮಾನ ಎಂದಿಗೂ ಕಡಿಮೆ ಆಗಲ್ಲ ಎಂಬುದನ್ನು ಅಭಿಮಾನಿಗಳು ಸಾಬೀತು ಮಾಡಿದ್ದಾರೆ.
—-

Be the first to comment