ರಶ್ಮಿಕಾ ಮಂದಣ್ಣಗೆ ಬಿಗಿ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಪತ್ರ ಬರೆದಿದ್ದಾರೆ.
ತಮ್ಮ ಪರಿಶ್ರಮ ಮತ್ತು ಪ್ರತಿಭೆ ಪ್ರದರ್ಶನದ ಮೂಲಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೆಸರುವಾಸಿಯಾದರು ಸಹ ರಶ್ಮಿಕಾ ಮಂದಣ್ಣ ಅವರಿಗೆ ಸೂಕ್ತ ಗೌರವ ದೊರೆಯದಿರುವುದು ವಿಷಾದಕರವಾಗಿದೆ. ಆದ್ದರಿಂದ ಅವರಿಗೆ ಸಲ್ಲಬೇಕಾದ ಗೌರವ ದೊರೆಯಲು ಸರ್ಕಾರ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
“ಬಾಲಿವುಡ್ನ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ರಂತಹ ಮೇರು ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿಕಾ ಶ್ರೇಷ್ಠ ನಟಿಯಾಗಿದ್ದಾರೆ. ಅವರ ಸ್ವಂತ ನಿರ್ಧಾರದ ಆಯ್ಕೆಗಳ ಸ್ವಾತಂತ್ರ್ಯದ ಹಕ್ಕನ್ನು ನಾವು ಗೌರವಿಸಬೇಕು. ಸರಕಾರ ರಶ್ಮಿಕಾ ಮಂದಣ್ಣ ಅವರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ನಟಿಯ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಸ್ತ್ರೀಪರವಾದ ನ್ಯಾಯವನ್ನು ಎತ್ತಿಹಿಡಿಯಬೇಕು” ಎಂದು ಎನ್.ಯು.ನಾಚಪ್ಪ ಹೇಳಿದ್ದಾರೆ.
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವು ಮಾರ್ಚ್ 01ರಿಂದ ಆರಂಭವಾಗಿ ಮಾರ್ಚ್08ರಂದು ಕೊನೆಗೊಂಡಿದೆ. ಈ ಸಂದರ್ಭದಲ್ಲಿ, ಬೆಂಗಳೂರು ಫಿಲ್ಮ್ ಫೆಸ್ಟ್ಗೆ ಆಹ್ವಾನ ನೀಡಿದರೂ ಅದನ್ನು ತಿರಸ್ಕರಿಸಿದ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿ ಶಾಸಕ ರವಿ ಗಣಿಗ, ಕನ್ನಡ ಚಿತ್ರರಂಗದಿಂದ ಬೆಳೆದರೂ ಸಹ ಕನ್ನಡ ಚಲನಚಿತ್ರೋತ್ಸವಕ್ಕೆ ನೀಡಿದ ಆಹ್ವಾನ ತಿರಸ್ಕರಿಸಿದವರಿಗೆ ಬುದ್ದಿ ಕಲಿಸಬೇಕು ಎಂದು ಆಕ್ರೋಶದಿಂದ ನುಡಿದಿದ್ದರು.

Be the first to comment