ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ದೇಶನ: ಅಭಿಜಿತ್ ತೀರ್ಥಹಳ್ಳಿ
ನಿರ್ಮಾಣ: ವಿ.ಜಿ ಮಂಜುನಾಥ್, ಪೂರ್ಣಿಮಾ ಗೌಡ
ತಾರಾಗಣ: ವಿಕಾಸ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಧಾ ಭಗವತಿ ಮೊದಲಾದವರು.
ರೇಟಿಂಗ್: 3.5
ಕವಲೆದುರ್ಗದ ಕೋಟೆ ಬೆಟ್ಟಕ್ಕೆ ಮಧ್ಯರಾತ್ರಿ ಬೇಟೆಗೆಂದು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ವಾಹನಗಳಲ್ಲಿ ಹೋದರೆ ಲೈಟ್ ಆಫ್ ಆಗಿ ಬಿಡುತ್ತದೆ. ಕಣ್ಮುಂದೆ ಬಿಳಿ ಸೀರೆ ದೆವ್ವ ಕಾಣಿಸುತ್ತದೆ. ಅಮವಾಸ್ಯೆ ರಾತ್ರಿ ಅಲ್ಲಿರುವವರು ರಕ್ತಕಾರಿ ಸಾಯುತ್ತಾರೆ. ಇಂಥದೊಂದು ಬೆಟ್ಟದ ಕಾಡಿನಲ್ಲಿ ಗಂಧದ ಕಳ್ಳತನಕ್ಕೆಂದು ಕಾಲಿಡುವ ಮೂವರು ಯುವಕರು ಎದುರಿಸಬೇಕಾಗಿ ಬರುವ ಪರಿಸ್ಥಿತಿಗಳೇನು ಎನ್ನುವುದೇ ಈ ಸಿನಿಮಾದ ಸಾರಾಂಶ.
ಚಿತ್ರದ ಕಾನ್ಸೆಪ್ಟ್ ಖಂಡಿತಾ ಹೊಸದೇನಲ್ಲ. ಆದರೆ ಚಿತ್ರಕಥೆಯ ಮೂಲಕ ನಿರ್ದೇಶಕರು ನೀಡಿರುವ ಚಮಕ್ ಕತೆಯನ್ನು ಹಾರರ್ ಮಾತ್ರವಲ್ಲ, ಸಸ್ಪೆನ್ಸ್ ಥ್ರಿಲ್ಲರ್ ಆಗುವಂತೆಯೂ ಮಾಡಿದೆ. ಇಲ್ಲಿ ಬ್ಯಾಚುಲರ್ ಗಳ ಗೋಳು ಇದೆ. ಪ್ರೇಮದ ಪಾಲು ಇದೆ. ಒಳ್ಳೆಯತನದ ಸೋಲು ಇದೆ. ಎಲ್ಲಕ್ಕಿಂತ ಆಚೆ ಹೊಸ ಕಲಾವಿದರ ಅದ್ಭುತ ಅಭಿನಯವಿದೆ.
ಪ್ರಧಾನ ಪಾತ್ರವಾದ ಸೂರಿಗೆ ವಿಕಾಸ್ ಉತ್ತಯ್ಯ ಜೀವ ತುಂಬಿದ್ದಾರೆ. ಮೊದಲ ಚಿತ್ರವಾದರೂ ಈ ಕಿರುತೆರೆ ನಟ ಭರವಸೆಯ ನಾಯಕನಾಗಿ ನಿಲ್ಲಬಲ್ಲ ಕ್ಯಾಲಿಬರ್ ತಮಗಿದೆ ಎಂದು ಸಾಬೀತು ಪಡಿಸಿದ್ದಾರೆ. ಸೂರಿ ಸ್ನೇಹಿತರಾದ ಪೆಟ್ಟಿಗೆ ಮತ್ತು ಗಾಬ್ರಿಯ ಪಾತ್ರಗಳನ್ನು ರಾಘವ್ ಕೊಡಚಾದ್ರಿ ಮತ್ತು ಮಿಥುನ್ ತೀರ್ಥಹಳ್ಳಿ ನಿಭಾಯಿಸಿದ್ದಾರೆ. ಅದರಲ್ಲೂ ಗಾಬ್ರಿಯಾಗಿ ಮಿಥುನ್ ನಟನೆ ನಗು ಉಕ್ಕಿಸುವಲ್ಲಿ ಯಶಸ್ವಿಯಾಗುತ್ತದೆ. ಉಳಿದಂತೆ ಸದಾ ಪೊಲೀಸ್ ಪಾತ್ರಗಳಲ್ಲಿ ಮಿಂಚುತ್ತಿದ್ದ ಅಶ್ವಿನ್ ಹಾಸನ್ ಇಲ್ಲೊಂದು ವಿಭಿನ್ನ ಪಾತ್ರವನ್ನೇ ಮಾಡಿದ್ದಾರೆ.
ತಾಂತ್ರಿಕವಾಗಿಯೂ ಚಿತ್ರ ಶ್ರೇಷ್ಠತೆ ಕಾಯ್ದುಕೊಂಡಿದ್ದು ಛಾಯಾಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತದ ಮೂಲಕ ಗೌತಮ್ ಶ್ರೀವತ್ಸ ತ್ರಿಪಲ್ ರೋಲ್ ಮಾಡಿದ್ದಾರೆ. ರಾತ್ರಿಯ ದೃಶ್ಯಗಳ ಚಿತ್ರೀಕರಣ, ಆತಂಕ ಸೃಷ್ಟಿಸುವ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಕೂಡ ಮನಸೆಳೆಯುವಂತಿವೆ. ಇದೊಂದು ಪರಿಪೂರ್ಣ ಮನರಂಜನೆಯ ಸಿನಿಮಾ ಎಂದು ಧೈರ್ಯದಿಂದ ಹೇಳಬಹುದು.

Be the first to comment