ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನಕ್ಕೆ ಒಳಗಾದ ದರ್ಶನ್ ಅವರಿಗೆ ಹೈಕೋರ್ಟ್ ನಿಯಮಗಳನ್ನು ಸಡಿಲಿಸಿದೆ.
ಈ ಮೊದಲು ಸೆಷನ್ಸ್ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವಂತಿರಲಿಲ್ಲ ಎಂಬ ಷರತ್ತನ್ನು ಕೋರ್ಟ್ ಹಾಕಿತ್ತು. ಇದರಿಂದ ದರ್ಶನ್ ಅವರು ಎಲ್ಲೇ ತೆರಳಬೇಕಾದರೂ ಕೋರ್ಟ್ನ ಅನುಮತಿ ಪಡೆದೇ ಹೋಗಬೇಕಿತ್ತು. ಈಗ ಕರ್ನಾಟಕ ಹೈಕೋರ್ಟ್ ನಿಯಮಗಳನ್ನು ಸಡಿಲಿಸಿದೆ. ಇದರಿಂದ ದರ್ಶನ್ ನಿಟ್ಟುಸಿರು ಬಿಟ್ಟಿದ್ದಾರೆ.
ಷರತ್ತು ಸಡಿಲಿಕೆ ಕೋರಿ ಹೈಕೋರ್ಟ್ಗೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ‘ಡೆವಿಲ್’ ಸಿನಿಮಾದ ಶೂಟ್ನಲ್ಲಿ ಬ್ಯುಸಿ ಆಗಬೇಕಿದೆ. ಇದಕ್ಕೆ ನಾನಾ ಕಡೆಗಳಿಗೆ ತೆರಳಬೇಕಾಗುತ್ತದೆ. ಪ್ರತಿ ಬಾರಿ ಅವರು ಕೋರ್ಟ್ನ ಮೊರೆ ಹೋಗೋಕೆ ಸಾಧ್ಯವಾಗುವುದಿಲ್ಲ. ದರ್ಶನ್ ಅವರು ಷರತ್ತುಗಳ ಸಡಿಲಿಕೆ ಮಾಡುವಂತೆ ಕೋರಿದ್ದರು.
ಅರ್ಜಿಗೆ ಎಸ್ ಪಿಪಿ ಪ್ರಸನ್ನಕುಮಾರ್ ‘ಜಾಮೀನು ಪಡೆಯುವಾಗ ಅನಾರೋಗ್ಯದ ಕಾರಣ ನೀಡಿದ್ದರು. ಈಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ’ ಎಂದು ಪ್ರಸನ್ನ ಕುಮಾರ್ ಆಕ್ಷೇಪಿಸಿದ್ದರು.
ಹೈಕೋರ್ಟ್ ದರ್ಶನ್ ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿದೆ. ಕೋರ್ಟ್ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಹೇಳಿದೆ.
ದರ್ಶನ್ ಇಂದಿನಿಂದ ‘ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ದರ್ಶನ್ ಅವರಿಗೆ ಬೆನ್ನು ನೋವು ಕಾಡುತ್ತಿದೆ. ಹೀಗಾಗಿ ಅವರು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಬೆನ್ನು ನೋವು ಪೂರ್ಣ ಗುಣಮುಖವಾದ ಬಳಿಕ ಚಿತ್ರೀಕರಣಕ್ಕೆ ಹೋಗಲಿದ್ದಾರೆ.

Be the first to comment