ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ಮ್ಯಾಕ್ಸ್ ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ ಮ್ಯಾಕ್ಸ್. ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರ ಕನ್ನಡ ಮಾತ್ರವಲ್ಲದೇ, ತೆಲುಗು-ಭಾಷೆಯಲ್ಲೂ ರಿಲೀಸ್ ಆಗಿತ್ತು. ಮ್ಯಾಕ್ಸ್ ಒಟಿಟಿ ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಒಟಿಟಿ ಜೊತೆಗೆ ಟಿವಿಯಲ್ಲಿ ಒಂದೇ ದಿನ ಕಿಚ್ಚ ಮ್ಯಾಕ್ಸ್ ಮೆರವಣಿಗೆ ಹೊರಡುತ್ತಿದೆ.
ಮ್ಯಾಕ್ಸ್ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಇದೇ ತಿಂಗಳ 15ರಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಮ್ಯಾಕ್ಸ್ ಚಿತ್ರ ಬಿಡುಗಡೆಗೂ ಮುನ್ನವೇ ಜೀ ವಾಹಿನಿ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿತ್ತು. ಮ್ಯಾಕ್ಸ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದರು. ಅದರಂತೆ ಚಿತ್ರತಂಡ ಫೆಬ್ರವರಿ 15ಕ್ಕೆ ಜೀ5 ಒಟಿಟಿ ಜೊತೆಗೆ ಟಿವಿಯಲ್ಲಿಯೂ ಪ್ರಸಾರ ಮಾಡುತ್ತಿದೆ. ಮ್ಯಾಕ್ಸ್ ಸಿನಿಮಾವನ್ನು ಜೀಕನ್ನಡದಲ್ಲಿ ಫೆ. 15ಕ್ಕೆ ರಾತ್ರಿ 7.50ಕ್ಕೆ ಪ್ರಸಾರವಾಗ್ತಿದ್ದು, ಅದೇ ಸಮಯದಲ್ಲಿಯೂ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್. ಒಳ್ಳೇ ಕೆಲಸ ಮಾಡುತ್ತಿದ್ದರೂ ಪದೇ ಪದೇ ಸಸ್ಪೆಂಡ್ ಶಿಕ್ಷೆ ಅನುಭಸಿರುವ ಪೊಲೀಸ್ ಅಧಿಕಾರಿ. ಅಮಾನತಿನಲ್ಲಿದ್ದ ಅರ್ಜುನ್ ಮಹಾಕ್ಷಯ್ ಅವರನ್ನು ಹೊಸ ಪೊಲೀಸ್ ಸ್ಟೇಷನ್ಗೆ ವರ್ಗಾವಣೆ ಮಾಡಲಾಗುತ್ತೆ. ಆದರೆ, ಅರ್ಜುನ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ರಾತ್ರಿಯೇ ಒಂದಿಷ್ಟು ಅವಘಡಗಳು ನಡೆಯುತ್ತವೆ. ಹೀಗಾಗಿ, ಮಾರನೇ ದಿನ ಕೆಲಸಕ್ಕೆ ಜಾಯಿನ್ ಆಗಬೇಕಿದ್ದ ಮ್ಯಾಕ್ಸ್ ಹಿಂದಿನ ರಾತ್ರಿಯಿಂದಲೇ ಕಾರ್ಯೋನ್ಮುಖರಾಗುತ್ತಾರೆ. ಆ ಘಟನೆ ಏನು? ಈ ಪ್ರಕರಣವನ್ನು ಮ್ಯಾಕ್ಸ್ ಹೇಗೆ ತೆಗೆದುಕೊಂಡು ಹೋಗುತ್ತಾನೆ ಎಂಬುದೇ ಸಿನಿಮಾ ಕಥೆ.
‘ಮ್ಯಾಕ್ಸ್’ ಚಿತ್ರವನ್ನು ತಮಿಳಿನ ಕಲೈಪುಲಿ ಎಸ್ ಧಾನು ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, ‘ಉಗ್ರಂ’ ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚೆಂಡೂರು, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, ತೆಲುಗು ನಟ ಸುನೀಲ್ ಮುಂತಾದವರು ನಟಿಸಿದ್ದರು. 2024ರ ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಮ್ಯಾಕ್ಸ್ ಥಿಯೇಟರ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಬಾಕ್ಸಾಫೀಸ್ ನಲ್ಲಿಯೂ ಒಳ್ಳೆ ಕಲೆಕ್ಷನ್ ಮಾಡಿತ್ತು.

Be the first to comment