ವಿಷ್ಣು ಸರ್, ಅವರಿಂದ ನಾನು ಕಲಿತದ್ದು ತುಂಬಾ ಇದೆ. ನನ್ನನ್ನು ಅವರು ಒರಟ, ಹುಂಬ ಅಂತ ಹೇಳ್ತಿದ್ದು ನಿಜ, ಅಂಥವನು ಈ ಮಟ್ಟಕ್ಕೆ ಬೆಳೆದಿದ್ದೇನೆ ಅಂದ್ರೆ ಅದಕ್ಕೆ ಅವರೇ ಕಾರಣ ಅಂತ ಹೇಳ್ತಿದ್ದಂತೆ ಕೆ.ಮಂಜು ಕಣ್ಣಾಲಿಗಳು ತುಂಬಿ ಬಂದವು. ಅದೊಂದು ಭಾವನಾತ್ಮಕ ಸಂದರ್ಭ. ಇದೆಲ್ಲ ನಡೆದದ್ದು ವಿಷ್ಣುಪ್ರಿಯ ಚಿತ್ರದ ಟ್ರೈಲರ್ ಬಿಡುಗಡೆಯಾದ ವೇದಿಕೆಯಲ್ಲಿ.
ಕೆ.ಮಂಜು ನಿರ್ಮಾಣದ, ಅವರ ಪುತ್ರ ಶ್ರೇಯಸ್ ಕೆ.ಮಂಜು, ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ನಟಿಸಿರುವ ‘ವಿಷ್ಣು ಪ್ರಿಯಾ’ ಚಿತ್ರದ ಟ್ರೈಲರನ್ನು ಬಾದ್ ಷಾ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು. ಕಲಾ ಸಾಮ್ರಾಟ್ ಎಸ್.ನಾರಾಯಣ್, ನಾಗತಿಹಳ್ಳಿ ಚಂದ್ರಶೇಖರ್, ಶ್ರೀಮತಿ ಭಾರತಿ ವಿಷ್ಣುವರ್ಧನ್ ರಂಥ ಕನ್ನಡ ಚಿತ್ರರಂಗದ ದಿಗ್ಗಜರೇ ತುಂಬಿದ್ದ ವೇದಿಕೆಯಲ್ಲಿ, ನಿರ್ಮಾಪಕ ಕೆ. ಮಂಜು ಅವರ ಹುಟ್ಟುಹಬ್ಬದ ದಿನವೇ ಈ ಟ್ರೈಲರ್ ಲಾಂಚ್ ಆಗಿದ್ದು ವಿಶೇಷ. ಇದಕ್ಕೆಲ್ಲ ಕಾರಣ ಕೆ.ಮಂಜು ಕನ್ನಡ ಚಿತ್ರರಂಗದೊಂದಿಗೆ ಇಟ್ಟುಕೊಂಡಿರುವ ಆತ್ಮೀಯತೆ. ನಂಟು.
ಇಂಥ ಅಪರೂಪದ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮಾತನಾಡುತ್ತ ಲವ್ ಸ್ಟೋರಿಗಳನ್ನು ಎಲ್ಲರೂ ಮಾಡಿದರೂ, ಅದನ್ನು ಪ್ರೆಸೆಂಟ್ ಮಾಡುವ ಸ್ಟೈಲ್ ಮೇಲೆ ಅದರ ಸೋಲು, ಗೆಲುವು ನಿಂತಿರುತ್ತೆ. ಒಬ್ಬನೇ ವ್ಯಕ್ತಿ 50 ಸಿನಿಮಾ ಪ್ರೊಡ್ಯೂಸ್ ಮಾಡುವುದು ಚಿಕ್ಕ ವಿಷಯವಲ್ಲ.ಒಬ್ಬ ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಇದು ದೊಡ್ಡ ಸಾಧನೆ. ಈಗ ನೋಡಿದ ಮೂರೂ ಹಾಡುಗಳು ಸುಂದರವಾಗಿವೆ. ಟ್ರೈಲರನ್ನೂ ಚೆನ್ನಾಗಿ ಕಟ್ ಮಾಡಿದ್ದಾರೆ, ಶ್ರೇಯಸ್ ನಲ್ಲಿರುವ ಶ್ರದ್ಧೆಯೇ ಆತನನ್ನು ಬೆಳೆಸುತ್ತದೆ ಎಂದು ಹೇಳಿದರು. ನಂತರ ಎಸ್.ನಾರಾಯಣ್ ಮಾತನಾಡಿ ವಿಷ್ಣು ಎಂಬ ಹೆಸರಲ್ಲಿ ಪ್ರೀತಿ, ಭಾವ, ಭಾವನೆಯಿದೆ. ಒಟ್ಟಾರೆ ಒಂದು ಶಕ್ತಿಯಿದೆ.ಆಥರದ ಶಕ್ತಿಯಿಟ್ಡುಕೊಂಡು ತೊಂಭತ್ತರ ದಶಕದ ಪ್ರೇಮಕಥೆಯನ್ನು ಮಾಡಿದ್ದಾರೆ. ಕಣ್ಣಿಗೆ, ಮನಸಿಗೆ ಮುದ ಕೊಡುವ ಹಾಡುಗಳು, ಶ್ರೇಯಸ್ ಭವಿಷ್ಯದ ಪೈರು. ಚಿತ್ರೀಕರಣ ಸಮಯದಲ್ಲಿ ನನಗಿಂತ ಮೊದಲು ಶೂಟಿಂಗ್ ಸೆಟ್ ಗೆ ಬರೋರು ಇಬ್ಬರು, ಒಂದು ಸುದೀಪ್, ಇನ್ನೊಂದು ಶ್ರೇಯಸ್, ತುಂಬಾ ಶ್ರದ್ಧೆ ಇರುವ ಹುಡುಗ. ಬಹಳ ದಿನಗಳ ನಂತರ ಒಂದು ಒಳ್ಳೆ ಲವ್ ಸ್ಟೋರಿ ತೆರೆಗೆ ಬರ್ತಿದೆ. ಇಂಥ ಸಿನಿಮಾಗಳು ಗೆಲ್ಲಬೇಕು. ಕನ್ನಡದಲ್ಲಿ ೪೮ ಸಿನಿಮಾ ಮಾಡಿ ಸೋಲು ಗೆಲುವುಗಳೆರಡನ್ನೂ ಸಮನಾಗಿ ಸ್ವೀಕರಿಸಿದಂಥ ನಿರ್ಮಾಪಕ ಮಂಜು ಬೇಗನೇ 50ನೇ ಚಿತ್ರ ಮಾಡಲಿ, ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಹೇಳಿದರು.
ಭಾರತಿ ವಿಷ್ಣುವರ್ಧನ್ ಮಾತನಾಡಿ ಇವತ್ತು ನಮ್ಮೆಜಮಾನ್ರು ಇದ್ದಿದ್ರೆ ತುಂಬಾ ಖುಷಿಪಡ್ತಿದ್ರು. ನನ್ನ ಬಿಟ್ಟು ನಿನ್ ಮಗನ್ನ ಹಾಕ್ಕೊಂಡು ಸಿನಿಮಾ ಮಾಡು ಅಂತ ಆಗಾಗ ಹೇಳ್ತಿದ್ದರು. ಈಚೆಗೆ ಜನ ಥೇಟರಿಗೆ ಬರೋದು ಕಮ್ಮಿಯಾಗಿದೆ. ಫ್ಯಾಮಿಲಿ ನೋಡುವಂಥ ಚಿತ್ರಗಳು ಬಂದರೆ ಚಿತ್ರಮಂದಿರಗಳು ತುಂಬುತ್ತವೆ. ದೇವರು ಎಲ್ಲರಿಗೂ ಒಂದು ಅದೃಷ್ಟ ಅಂತ ಕೊಟ್ಟಿರ್ತಾನೆ. ಅದು ಯಾವಾಗ ಬರುತ್ತೆ ಅಂತ ಗೊತ್ತಿರಲ್ಲ, ಬರೋವರ್ಗೂ ನಾವು ಕಾಯಬೇಕು. ಖಂಡಿತ ಸಿಕ್ಕೇ ಸಿಗುತ್ತೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೆ.ಮಂಜುಗೆ ಒಳ್ಳೇದಾಗಲಿ ಎಂದರು. ನಂತರ ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ಗುರು ದೇಶಪಾಂಡೆ, ನಟಿ ನಿಶ್ವಿಕಾ ನಾಯ್ಡು, ಚಿತ್ರದ ನಿರ್ದೇಶಕ ವಿ.ಕೆ. ಪ್ರಕಾಶ್ ಎಲ್ಲರೂ ತಂದೆ, ಮಗ ಇಬ್ಬರಿಗೂ ಶುಭಾಶಯ ಕೋರಿದರು.
ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿರುವ ವಿಷ್ಣುಪ್ರಿಯಾ ತೊಂಭತ್ತರ ದಶಕದಲ್ಲಿ ನಡೆಯುವ ಅಪರೂಪದ ಇನ್ ಟೆನ್ಸ್ ಲವ್ ಸ್ಟೋರಿಯನ್ನು ಹೇಳೋ ಚಿತ್ರ. ಈಗಾಗಲೇ ‘ಸುಮ್ಮನೆ ಸುಮ್ಮನೆ’ ಸೇರಿ ಮೂರೂ ಹಾಡುಗಳು ಎಲ್ಲರ ಬಾಯಲ್ಲಿ ಗುನುಗುತ್ತಿವೆ.
ಮಲಯಾಳಂ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕ ವಿ.ಕೆ.ಪ್ರಕಾಶ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ಅಲ್ಲದೆ ವಿಷ್ಣು ಪ್ರಿಯಾ ಚಿತ್ರಕ್ಕೆ ವಿನೋದ್ ಭಾರತಿ ಅವರ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಅವರ ಸಂಕಲನವಿದೆ.
![](https://bcinemas.in/wp-content/uploads/2020/11/whatsapp.png)
Be the first to comment