ʻಅನ್ಲಾಕ್ ರಾಘವʼ.. ಚಿತ್ರದ ಹೆಸರೇ ಹೇಳುವಂತೆ ನಾಯಕ ಅನ್ಲಾಕ್ ಸ್ಪೆಶಲಿಸ್ಟ್ ಎಂಬುದು ಸ್ಪಷ್ಟವಾಗುತ್ತದೆ. ಆದ್ರೆ, ಏನನ್ನು ಅನ್ಲಾಕ್ ಮಾಡ್ತಾನೆ? ಹೇಗೆ ಅನ್ಲಾಕ್ ಮಾಡ್ತಾನೆ ಅನ್ನೋದಕ್ಕೆ ಉತ್ತರ ಫೆ.7 ರಂದು ಸಿಗಲಿದೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಚಂದನವನದ ತಾರೆಯರೂ ವಾಹ್ ರೇ ವಾಹ್ ಶಹಬ್ಬಾಸ್ ಎಂದಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನ ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿರುವ ʻಅನ್ಲಾಕ್ ರಾಘವʼ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 500 ಕ್ಕೂ ಹೆಚ್ಚು ರೀಲ್ಸ್ಗಳಾಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಸೃಷ್ಠಿಸಿದೆ.
ಇದುವರೆಗೂ ʻಅನ್ಲಾಕ್ ರಾಘವʼ ಟ್ರೇಲರ್ ಹಾಗೂ ಹಾಡುಗಳನ್ನು ವೀಕ್ಷಿಸಿ ಚಂದನವನಕ್ಕೆ ಸಿಕ್ಕಿರುವ ಪ್ರಾಮಿಸಿಂಗ್ ಹೀರೋ ಮಿಲಿಂದ್ ಗೌತಮ್ ಹಾಗೂ ತಂಡಕ್ಕೆ ಭೇಷ್ ಎಂದು ಬೆನ್ನು ತಟ್ಟಿದ ಚಂದನವನದ ತಾರೆಯರ ಪಟ್ಟಿ ದೊಡ್ಡದಿದೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆರಂಭದಿಂದಲೂ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ʻಅನ್ಲಾಕ್ ರಾಘವʼ ಟೈಟಲ್ ರಿಲೀಸ್ ಮಾಡಿದ್ದ ಅವರು, ಟ್ರೇಲರ್ ಲಾಂಚ್ ಸಹ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಡಾಲಿ ಧನಂಜಯ್ ಈ ಹಿಂದೆ ʻಮೂಡ್ಸ್ ಆಫ್ ರಾಘವʼ ಟೀಸರ್ ಬಿಡುಗಡೆ ಮಾಡಿ ನವ ನಟ ಮಿಲಿಂದ್ಗೆ ಬೆಸ್ಟ್ ಆಫ್ ಲಕ್ ಹೇಳಿದ್ದರು.
ಅದೇ ರೀತಿ, ಹ್ಯಾಟ್ರಿಕ್ ನಿರ್ದೇಶಕ ಜೋಗಿ ಪ್ರೇಮ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕರಾದ ಸಿಂಪಲ್ ಸುನಿ, ದಿನೇಶ್ ಬಾಬು, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ರಾಜ್ಯ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾ ರಡ್ಡಿ ಅವರು ಟ್ರೇಲರ್ ಹಾಗೂ ಹಾಡುಗಳನ್ನು ವೀಕ್ಷಿಸಿ ಚಿತ್ರ ಶತಕ ಪೂರೈಸಲಿ ಎಂದು ಮನದುಂಬಿ ಹಾರೈಸಿದ್ದಾರೆ.
ಸ್ಯಾಂಡಲ್ವುಡ್ ಕಾಂತಾರ ಸಪ್ತಮಿ ಗೌಡ, ನಟರಾದ ರಮೇಶ್ ಭಟ್, ಕೋಮಲ್, ನಟಿಯರಾದ ಸಂಜನಾ ಗಲ್ರಾನಿ ಮತ್ತು ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸಿಂಗರ್ ಸುಪ್ರಿಯಾ ರಾಮ್, ಬಾಲಿವುಡ್ ಗಾಯಕಿ ಹಂಸಿಕಾ ಐಯ್ಯರ್ ಮೊದಲಾದವರಿಂದ ಮೆಚ್ಚುಗೆಯ ಮಹಾಪುರವೇ ಹರಿದು ಬಂದಿದೆ.
ರಾಮಾ ರಾಮಾ ರೇ & ಮ್ಯಾನ್ ಆಫ್ ದಿ ಮ್ಯಾಚ್ ಖ್ಯಾತಿಯ ಡಿ.ಸತ್ಯಪ್ರಕಾಶ್ ಅನ್ಲಾಕ್ ರಾಘವನಿಗೆ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಕೆಲಸ ಮಾಡಿರುವ, ʻರಾಜು ಜೇಮ್ಸ್ ಬಾಂಡ್ʼ ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ. ಛಾಯಾಗ್ರಾಹಕ ಲವಿತ್, ಪ್ರತಿಯೊಂದು ದೃಷ್ಯಗಳನ್ನೂ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಚಿತ್ರದಲ್ಲಿ ʻನನ್ ಹುಡುಗಿʼ, ʻಲಾಕ್ ಲಾಕ್ ಲಾಕ್ʼ, ʻರಾಘವ ರಾಘವʼ ಎಂಬ ಮೂರು ಬ್ಯೂಟಿಫುಲ್ ಹಾಡುಗಳಿದ್ದು, ವರಾಹ ರೂಪಂ ಖ್ಯಾತಿಯ ಸಾಯಿ ವಿಘ್ನೇಶ್, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕ ವಿಜಯ್ ಪ್ರಕಾಶ್ ಹಾಗೂ ಸರಿಗಮಪ ಖ್ಯಾತಿಯ ಅಂಕಿತಾ ಕುಂಡು ಅವರ ಕಂಠಸಿರಿಯಲ್ಲಿ ಮೂಡಿ ಬಂದಿವೆ. ಹೃದಯಶಿವ, ಸಿಂಗಾರ ಸಿರಿಯೇ ಖ್ಯಾತಿಯ ಪ್ರಮೋದ್ ಮರವಂತೆ ಹಾಗೂ ವಾಸುಖಿ ವೈಭವ್ ಹಾಡುಗಳಿಗೆ ಸುಂದರವಾದ ಸಾಲುಗಳ ತೋರಣ ಕಟ್ಟಿದ್ದಾರೆ.
ಮಯೂರ ಮೋಷನ್ ಪಿಕ್ಚರ್ಸ್ ಹಾಗೂ ಐಪ್ಲೆಕ್ಸ್ ಸಹಯೋಗದಲ್ಲಿ ಮಂಜುನಾಥ ಡಿ ಹಾಗೂ ಗಿರೀಶ್ ಕುಮಾರ್ ಎನ್ ನಿರ್ಮಿಸಿರುವ ಅನ್ಲಾಕ್ ರಾಘವ ಚಿತ್ರಕ್ಕೆ ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ, ಮುರುಳಿ ಮತ್ತು ಧನಂಜಯ ಅವರ ನೃತ್ಯ ನಿರ್ದೇಶನವಿದೆ. ಕೋಟೆನಗರಿ ಚಿತ್ರದುರ್ಗದ ಬೆಟ್ಟ, ಗುಡ್ಡ, ರಸ್ತೆ, ಗಲ್ಲಿಗಳು ಹಾಗೂ ಬೆಂಗಳೂರಿನ ಸುಂದರ ತಾಣಗಳು, ಕಲರ್ಫುಲ್ ಸೆಟ್ಗಳಲ್ಲಿ ಚಿತ್ರೀಕರಣ ಮಾಡಲಾಗಿರುವ ಹಾಗೂ ಶೋಭರಾಜ್, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ʻಅನ್ಲಾಕ್ ರಾಘವʼ ಚಿತ್ರದಲ್ಲಿ ಹಾಸ್ಯ ನಟ ಸಾಧು ಕೋಕಿಲ ಅವರ ವಿಭಿನ್ನ ಪಾತ್ರ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಹೊಸ ಕಥೆ, ಯುವ ಪ್ರತಿಭೆಗಳು ಹಾಗೂ ಅನುಭವೀ ಕಲಾವಿದರಿಂದ ಕೂಡಿದ ʻಅನ್ಲಾಕ್ ರಾಘವʼ ಚಿತ್ರಕ್ಕೆ ಸ್ಯಾಂಡಲ್ವುಡ್ ತಾರೆಯರು ಹಾಗೂ ಗಣ್ಯರು ಆಲ್ ದಿ ಬೆಸ್ಟ್ ಹೇಳಿದ್ದಾರೆ.
Be the first to comment