ಚಿತ್ರ: ಕಾಡು ಮಳೆ
ನಿರ್ದೇಶನ: ಸಮರ್ಥ
ನಿರ್ಮಾಪಕ: ಮಂಜುನಾಥ್ ಟಿ ಎಸ್
ತಾರಾಗಣ: ಹರ್ಷನ್, ಸಂಗೀತಾ, ವಿಜಯಲಕ್ಷ್ಮಿ ಇತರರು
ರೇಟಿಂಗ್: 3
ನಿಗೂಢವಾದ ಕಾಡಿಗೆ ಹೋದಾಗ ವಾಸ್ತವ ಹಾಗೂ ಭ್ರಮೆಯ ಸುಳಿಗೆ ಸಿಕ್ಕಾಗ ಯಾವ ರೀತಿಯ ಅನುಭವ ಆಗುತ್ತದೆ ಎನ್ನುವುದನ್ನು ತಿಳಿಸುವ ಚಿತ್ರ ಈ ವಾರ ತೆರೆಗೆ ಬಂದಿರುವ ಕಾಡುಮಳೆ.
ಚಿತ್ರದ ಶೀರ್ಷಿಕೆಯಂತೆ ಚಿತ್ರ ಕಾಡಿನಲ್ಲಿ ನಡೆಯುತ್ತದೆ. ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಡಿಗೆ ಹೋದಾಗ ತಾನು ಇಂದಿನ ರಾತ್ರಿ ಕಂಡ ಕನಸುಗಳನ್ನು ಅಲ್ಲಿ ಕಾಣುತ್ತಾಳೆ. ಅವಳಿಗೆ ಭ್ರಮೆ ಹಾಗೂ ವಾಸ್ತವದ ನಡುವೆ ಗೊಂದಲ ಉಂಟಾಗುತ್ತದೆ. ಪ್ರೇಕ್ಷಕರಿಗೆ ಈ ಕಾಲ್ಪನಿಕ ಕಥೆಗೆ ಥ್ರಿಲ್ಲರ್ ಗುಣವನ್ನು ಬೆರೆಸಿ ನಿರೂಪಣೆ ಮಾಡಲಾಗಿದೆ.
ಕಾಡುಮಳೆ ಸಿನಿಮಾ ಕಥೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಪ್ರೇಕ್ಷಕನಿಗೆ ಒಂದಷ್ಟು ಸಮಯ ಹಿಡಿಯುತ್ತದೆ. ಇಲ್ಲಿ ದೃಶ್ಯಗಳು ಪುನರಾವರ್ತನೆ ಆಗುತ್ತವೆ. ಸಾಕಷ್ಟು ಗಮನ ಕೊಟ್ಟು ಪ್ರೇಕ್ಷಕರು ಸಿನಿಮಾ ನೋಡಬೇಕಾಗುತ್ತದೆ. ಬೇರೆ ಕಡೆಗೆ ಗಮನ ಹೋದರೆ ಮುಂದಿನ ದೃಶ್ಯದಲ್ಲಿ ಏನಾಗುತ್ತದೆ ಎಂದು ತಿಳಿಯುವುದು ಕಷ್ಟವಾಗುತ್ತದೆ.
ಚಿತ್ರದಲ್ಲಿ ಪ್ರಮುಖವಾಗಿ ಎರಡು ಪಾತ್ರಗಳಿವೆ. ಅವರಿಬ್ಬರೂ ಕಾಡಿನ ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ. ಅದರಿಂದ ಹೊರಬರಲು ಅವರು ಪಡುವ ಪ್ರಯತ್ನಗಳು ಚಿತ್ರದ ಕಥೆಯಾಗಿದೆ.
ದೃಶ್ಯಗಳ ಪುನರಾವರ್ತನೆ ಪ್ರೇಕ್ಷಕರಿಗೆ ಏಕತಾನತೆ ಅನಿಸುತ್ತದೆ. ಆದರೆ ಹಿನ್ನೆಲೆ ಸಂಗೀತ ಥ್ರಿಲಿಂಗ್ ಅನುಭವ ನೀಡುತ್ತದೆ. ಕಾಡಿನ ವಿಚಿತ್ರ ವರ್ತನೆಯ ಬಗ್ಗೆ ನಿರ್ದೇಶಕರು ತಮ್ಮದೇ ಆದ ಥಿಯರಿ ಮುಂದೆ ಇಟ್ಟಿದ್ದಾರೆ. ಕಾಡು, ಅಲ್ಲಿನ ನಿಗೂಢತೆಯನ್ನು ಇಷ್ಟ ಪಡುವವರಿಗೆ ಚಿತ್ರ ಹಿದಿಸಬಹುದು.
Be the first to comment