ಚಿತ್ರ ವಿಮರ್ಶೆ : ರಾಜಣ್ಣನ ಮಗ,ಆಕ್ಷನ್ ಮೂಲಕ ಜಗಮಗ

 

ಚಿತ್ರ: ರಾಜಣ್ಣನ ಮಗ
ತಾರಾಗಣ: ಹರೀಶ್ ಜಲಗೆರೆ, ಅಕ್ಷತಾ ಶ್ರೀಧರ ಶಾಸ್ತ್ರಿ
ನಿರ್ದೇಶನ: ಕೋಲಾರ ಸೀನು
ನಿರ್ಮಾಣ: ಜಲಗೆರೆ ಪ್ರೈವೇಟ್ ಲಿಮಿಟೆಡ್

ಒಂದು ಸುಂದರವಾದ ಮಧ್ಯಮ ವರ್ಗದ ಕುಟುಂಬ. ತಂದೆ ತಾಯಿಯ ಮೂವರು ಗಂಡು ಮಕ್ಕಳಲ್ಲಿ ಗೌರೀಶಂಕರ್ ಮಧ್ಯಮ ಪುತ್ರ. ಆತನೇ ಈ ಚಿತ್ರ ಕತೆಯ ಕೇಂದ್ರಬಿಂದು.

ನಾಯ್ಡು ಎಂಬ ಸ್ಥಳೀಯ ನಾಯಕನೊಬ್ಬನ ಕೊಲೆ ಪ್ರಕರಣದಲ್ಲಿ ಎಂಟು ವರ್ಷಗಳ ಕಾಲ ಜೈಲು ಪಾಲಾಗುತ್ತಾನೆ. ಜೈಲ್ ನಿಂದ ಮರಳುವ ವೇಳೆ ತಾಯಿಯೊಬ್ಬಳನ್ನು ಹೊರತು ಪಡಿಸಿ ಉಳಿದವರಿಗೆಲ್ಲ ಆತನ ಬಗ್ಗೆ ವಿರಕ್ತ ಭಾವ ಮೂಡಿರುತ್ತದೆ.
ಆದರೆ ಸಾಮಾನ್ಯ ಬದುಕಿನ ನಿರೀಕ್ಷೆಯಲ್ಲಿ ಮರಳಿದ ಗೌರೀಶಂಕರ್ ಇದರಿಂದಾಗಿ ಆಘಾತಕ್ಕೊಳಗಾಗುತ್ತಾನೆ. ಆದರೆ ಒಮ್ಮೆ ಕದ್ದವನು ಕಳ್ಳನೇ ಎನ್ನುವ ಹಾಗೆ ಮತ್ತೆ ಆತ ಸಾಮಾನ್ಯ ಬದುಕಿಗೆ ಮರಳದ ಮಾದರಿಯಲ್ಲಿ ಘಟನೆಗಳು ನಡೆಯುತ್ತವೆ. ಇದೇ ವೇಳೆ ನಾಯ್ಡುವಿನ ಪುತ್ರ ಕೂಡ ಗೌರಿಯ ಸಾವಿಗೆ ಹಗೆಯಿಂದ ಕಾಯುತ್ತಿರುತ್ತಾನೆ. ಕತೆಯ ಅಂತಿಮಘಟ್ಟದಲ್ಲಿ ಒಂದು ತಿರುವು ಇದೆ ಎನ್ನುವುದನ್ನು ಬಿಟ್ಟರೆ ರೌಡಿಸಂ ಕುರಿತಾದ ಚಿತ್ರಗಳ ಕತೆಯಲ್ಲಿನ ಬಹುತೇಕ ನಿರೀಕ್ಷಿತ ಅಂಶಗಳೇ ಈ ಚಿತ್ರದಲ್ಲಿಯೂ ಇವೆ. ಹಾಗಾಗಿ ವಿಭಿನ್ನ ಚಿತ್ರ ಎಂದೇನೂ ಹೇಳುವ ಹಾಗಿಲ್ಲ.

ಒಟ್ಟು ಚಿತ್ರದ ಮೇಕಿಂಗ್ ಮೂಲಕ ಚಿತ್ರದಲ್ಲಿ ಒಂದು ಹೊಸತನ ಇರುವುದನ್ನು ಅಲ್ಲಗಳೆಯುವ ಹಾಗಿಲ್ಲ. ಮಾಸ್ ನಾಯಕನಾಗಿ ಹರೀಶ್ ಜಲಗೆರೆ ನಿರ್ವಹಿಸಿರುವ ಗೌರೀಶಂಕರನ ಪಾತ್ರ ಚೆನ್ನಾಗಿದೆ. ರೌಡಿಸಂ ಚಿತ್ರಕ್ಕೆ ಹೇಳಿ ಮಾಡಿಸಿದ ನಾಯಕನಂತೆ ಕಾಣುತ್ತಾರೆ. ಅವರಿಗೆ ಜೋಡಿಯಾಗಿ ನಟಿಸಿರುವ ಅಕ್ಷತಾ ಡಾಕ್ಟರ್ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ. ನಾಯಕನ ತಂದೆಯಾಗಿ ಚರಣ್ ರಾಜ್ ಗೆ ಹೆಚ್ಚು ದೃಶ್ಯಗಳೇನೂ ಇಲ್ಲ. ಆದರೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಒಟ್ಟು ಚಿತ್ರದ ಸಾಹಸ ಸಂಯೋಜನೆ ಮತ್ತು ಅದಕ್ಕೆ ನೀಡಲಾದ ಸಂಗೀತ ಆಕರ್ಷಕ ಅಂಶವಾಗಿದೆ.

ಒಟ್ಟಿನಲ್ಲಿ ಆ್ಯಕ್ಷನ್ ಚಿತ್ರಗಳ ಅಭಿಮಾನಿಗಳು ನೋಡಲೇಬೇಕಾದ ಚಿತ್ರ ಇದು ಎಂದು ಖಂಡಿತವಾಗಿ ಹೇಳಬಹುದು.

– Bheemaraya

 

This Article Has 1 Comment
  1. Pingback: tree service company Gatesville

Leave a Reply

Your email address will not be published. Required fields are marked *

Translate »
error: Content is protected !!