ಮನಸ್ಸು ಮಲ್ಲಿಗೆ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ನಂದಕುಮಾರ್ CM ನಿರ್ದೇಶಿಸಿರುವ ಹಾಗೂ ಅರುಣ್ – ರಾಣಿ ವರದ್ ಅಭಿನಯದ “1990s” ಚಿತ್ರಕ್ಕಾಗಿ ನಿರ್ದೇಶಕ ನಂದಕುಮಾರ್ ಅವರೆ ಬರೆದಿರುವ “ತಾಂಡವ” ಎಂಬ ಹಾಡು ಇತ್ತೀಚೆಗೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಸಂಗೀತ ನೀಡಿರುವ ಮಹಾರಾಜ ಅವರೆ, ವಲ್ಲಭ್ ಅವರೊಟ್ಟಿಗೆ ಹಾಡಿರುವ ಈ ಹಾಡನ್ನು ಬಿಡುಗಡೆ ಮಾಡಿದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಹಲವು ವರ್ಷಗಳಿಂದ ಚಿತ್ರರಂಗದೊಂದಿಗೆ ಒಡನಾಟವಿರುವ ನನಗೆ ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಇದು 1990 ರಲ್ಲಿ ನಡೆಯುವ ಪ್ರೇಮಕಥೆ. ಚಿತ್ರದ ಕಥೆ ನಡೆಯುವುದು ಈ ಕಾಲಘಟ್ಟದಲ್ಲಾದರೂ ನಾಯಕನ ಕಲ್ಪನೆ 35ವರ್ಷಗಳ ಹಿಂದಿನಾದಗಿರುತ್ತದೆ. ಈವರೆಗೂ ಸಾಕಷ್ಟು ಪ್ರೇಮಕಥೆಗಳು ಬಂದಿವೆಯಾದರೂ ನಮ್ಮ ಚಿತ್ರದ ಕಥೆ ವಿಭಿನ್ನ. ಚಿತ್ರದಲ್ಲಿ 1990s ಭಾಗ 90% ಇರುತ್ತದೆ. ಮಿಕ್ಕ 10% ಮಾತ್ರ ಈ ಕಾಲಘಟ್ಟದ್ದು. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ “ತಾಂಡವ” ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರವನ್ನು ಆರಂಭಿಸಿದ್ದೇವೆ. ಚಿತ್ರ ಮೊದಲು ಆರಂಭವಾಗಿದ್ದು, ಕನ್ನಡದಲ್ಲಿ. ಆನಂತರ ಇದು ಎಲ್ಲಾ ಭಾಷೆಗಳಿಗೂ ಸಲ್ಲುವ ಕಥೆ ಎಂದು ಸಾಕಷ್ಟು ಜನರು ಅಭಿಪ್ರಾಯ ಪಟ್ಟರು. ಈಗ “1990” s ಚಿತ್ರ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ದೇಶಕ ನಂದಕುಮಾರ್ ಸಿ.ಎಂ.
ನಾವು ನಾಲ್ಕು ಜನ ಸ್ನೇಹಿತರು ಸೇರಿ ಮನಸ್ಸು ಮಲ್ಲಿಗೆ ಕ್ರಿಯೇಷನ್ಸ್ ಎಂಬ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿರುವ ನವಿರಾದ ಪ್ರೇಮಕಥೆ “1990”s ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕರಲ್ಲೊಬ್ಬರಾದ ಅರುಣ್ ಕುಮಾರ್.
ರಂಗಭೂಮಿ ಕಲಾವಿದನಾಗಿ ಅನುಭವವಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ನಿರ್ದೇಶಕ ನಂದಕುಮಾರ್ ಅವರು ಎಲ್ಲರಿಗೂ ಹಿಡಿಸುವ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನನ್ನದು ಮುಗ್ದ ಪ್ರೇಮಿಯ ಪಾತ್ರ ಎಂದರು ನಾಯಕ ಅರುಣ್. ಅರುಣ್, ಕನ್ನಡದ ಸೂಪರ್ ಹಿಟ್ ಚಿತ್ರಗಳಿಗೆ ಸಂಕಲನ ಕಾರ್ಯ ನಿರ್ವಹಿಸಿರುವ ಸಂಕಲನಕಾರ ಜನಾರ್ದನ್ ಅವರ ಪುತ್ರ.
ನಾನು ಈ ಚಿತ್ರದ ಟೀಸರ್ ಬಿಡುಗಡೆಯಾದಾಗ ಗರ್ಭಿಣಿಯಾಗಿದ್ದೆ. ಈಗ ಜನವರಿ 6 ನೇ ತಾರೀಖು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದೇನೆ. ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ ಎಂದರು ನಾಯಕಿ ರಾಣಿ ವರದ್.
ಚಿತ್ರದ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಮಹಾರಾಜ ಮಾಹಿತಿ ನೀಡಿದರು. ಛಾಯಾಗ್ರಾಹಕ ಹಾಲೇಶ್, ಸಾಹಸ ನಿರ್ದೇಶಕ ಅಶೋಕ್, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್, ಸಂಕಲನಕಾರ ಕೃಷ್ಣ ಹಾಗೂ ಖಳನಟ ದೇವು ಮುಂತಾದವರು ” 1990″ s ಬಗ್ಗೆ ಮಾತನಾಡಿದರು.
Be the first to comment