ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ನಟಿಸಿರುವ ಚಿತ್ರ `ದಿಲ್ ದಾರ್’. ಆರಂಭಿಕವಾಗಿ ಕೆಲ ಮಾಹಿತಿ ನೀಡಿದ್ದ ಚಿತ್ರತಂಡ ಯಾವ ಭರಾಟೆಗಳೂ ಇಲ್ಲದೆ ತಣ್ಣಗೆ ಈ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿದೆ. ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಹಾಡೊಂದು ಮಾತ್ರವೇ ಸದ್ಯ ಬಾಕಿ ಉಳಿದುಕೊಂಡಿದೆ. ಈ ಹಂತ ದಾಟಿಕೊಂಡರೂ ಸದರಿ ಸಿನಿಮಾ ನಾಯಕಿಯ ಬಗ್ಗೆ ಚಿತ್ರತಂಡ ಗೌಪ್ಯತೆ ಕಾಪಾಡಿಕೊಂಡಿತ್ತು. ಕಡೆಗೂ ಕೀರ್ತಿ ಕೃಷ್ಣ ಶ್ರೇಯಸ್ ಗೆ ನಾಯಕಿಯಾಗಿ ನಟಿಸಿದ್ದಾರೆಂಬ ಅಧಿಕೃತ ಮಾಹಿತಿಯನ್ನು ಇದೀಗ ಜಾಹೀರು ಮಾಡಲಾಗಿದೆ!
ಕೀರ್ತಿ ಕೃಷ್ಣ ಇತ್ತೀಚೆಗಷ್ಟೇ ಚಿತ್ರರಂಗದಲ್ಲಿ ಮೆಲುವಾಗಿ ಕೇಳಿಸುತ್ತಿರೋ ಹೆಸರು. ವಿಶೇಷವೆಂದರೆ, ಈಕೆ ನಟ ಶರಣ್ ಅವರ ಸೊಸೆ. ಅವರ ತಂಗಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ. ಸಿಂಪಲ್ ಸುನಿ ಮುಂಬರುವ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿರುವ ಕೀರ್ತಿ, ಈಗಾಗಲೇ ದಿಲ್ ದಾರ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಒಂದೊಳ್ಳೆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ. ಒಂದು ವಿರಳ ಪ್ರೇಮ ಕಥೆಗೆ ನಿರ್ದೇಶಕರಿಲ್ಲಿ ದೃಷ್ಯ ಬರೂಪ ಕೊಟ್ಟಿದ್ದಾರಂತೆ. ಈ ಮೂಲಕ ಶ್ರೇಯಸ್ ಗೆ ಜೋಡಿಯಾಗಿ ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಖುಷಿಯಲ್ಲಿದ್ದಾರೆ.
ಪ್ರೇಮಕಥೆ ಅಂದಾಕ್ಷಣ ಒಂದು ಸಿದ್ಧಸೂತ್ರಕ್ಕಮಟಿಕೊಂಡ ಕಲ್ಪನೆ ಮೂಡಿಕೊಳ್ಳೋದು ಸಹಜ. ಆದರೆ, ಚಿತ್ರರಂಗದಲ್ಲಿ ದಶಕಗಳ ಕಾಲ ಪಳಗಿಕೊಂಡಿರುವ ಮಧುಗೌಡ ಚೌಕಟ್ಟಿನಾಚೆ ಹಬ್ಬಿಕೊಂಡ ಚೆಂದದ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿದ್ದಾರಂತೆ. ಶ್ರೇಯಸ್ ಮಂಜು ಕೂಡಾ ಅತ್ಯಂತ ಖುಷಿಯಿಂದಲೇ ಸದರಿ ಕಥೆಯನ್ನು ಒಪ್ಪಿಕೊಂಡಿದ್ದಾರೆ. ವೇಗವಾಗಿ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ಸದ್ಯ ಒಂದು ಹಾಡನ್ನಷ್ಟೇ ಬಾಕಿ ಉಳಿಸಿಕೊಂಡಿದೆ. ಅತ್ಯಂತ ಅದ್ಧೂರಿಯಾಗಿ, ವಿಶೇಷವಾಗಿ ಆ ಹಾಡನ್ನು ಸೆರೆ ಹಿಡಿಯಲು ನಿರ್ದೇಶಕರು ತಯಾರಾಗಿದ್ದಾರೆ. ಈಗಾಗಲೇ ಅರ್ಜುನ್ ಜನ್ಯಾ ಸ್ಪೆಷಲ್ ಹಾಡೊಂದನ್ನು ಕಂಪೋಸ್ ಮಾಡಿ ಕೊಟ್ಟಿದ್ದಾರೆ. ಅದಕ್ಕೆ ತಕ್ಕುಗಾದ ನೃತ್ಯ ಸಂಯೋನೆಯೂ ನಡೆದಿದೆ. ಅಪ್ಪು ನಿರ್ಗಮನದ ನಂತರ ಆ ಪರಿಯ ನೃತ್ಯ ವೈಭವ ಮರೆಯಾದಂತಿದೆ. ಆದರೆ, ಈ ಹಾಡಿನಲ್ಲಿ ವಿಭಿನ್ನ ನೃತ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ನಾಯಕ ನಟ ಶ್ರೇಯಸ್ ಇದಕ್ಕಾಗಿ ಶ್ರಮಪಟ್ಟು ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದಿಡೀ ಚಿತ್ರತಂಡವೀಗ ಆ ಹಾಡಿಗಾಗಿ ತಾಲೀಮು ನಡೆಸುತ್ತಿದೆ.
ಆ ಹಾಡಿನ ಚಿತ್ರೀಕರಣದೊಂದಿಗೆ ಎಲ್ಲವೂ ಮುಕ್ತಾಯಗೊಳ್ಳಲಿದೆ. ಅಂದುಕೊಂಡಂತೆಯೇ ಎಲ್ಲ ನಡೆದರೆ ಇದೇ ಯುಗಾದಿಯ ಆಸುಪಾಸಲ್ಲಿ ದಿಲ್ ದಾರ್ ಚಿತ್ರ ತೆರೆಗಾಣಲಿದೆ. ಇಂಥಾ ಚಿತ್ರದ ಮೂಲಕ ಕೀರ್ತಿ ಕೃಷ್ಣ ಅವರಿಗೂ ಬಹುದೊಡ್ಡ ಬ್ರೇಕ್ ಸಿಗುವ ನಿರೀಕ್ಷೆಗಳಿವೆ. ಎಲ್ಲಾ ವರ್ಗಕ್ಕೂ ಹಿಡಿಸುವಂತೆ ರೂಪುಗೊಂಡಿರುವ ಈ ಸಿನಿಮಾದಲ್ಲಿ ಭರಪೂರ ಮನೋರಂಜನೆಯೂ ಇರಲಿದೆ. ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್, ಚಿಲ್ಲರ್ ಮಂಜು ಮುಂತಾದ ಹಾಸ್ಯ ನಟರ ದಂಡೇ ಈ ಚಿತ್ರದಲ್ಲಿದೆ. ಕೆಜಿಎಫ್ ಖ್ಯಾತಿಯ ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಖಳ ನಟರಾಗಿ ಅಬ್ಬರಿಸಿದ್ದಾರೆ. ಭರ್ಜರಿ ಆಕ್ಷನ್ ಸೀನುಗಳಲ್ಲಿ ಶ್ರೇಯಸ್ ಮಂಜು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದ್ದಾರೆಂಬುದು ಚಿತ್ರತಂಡದ ಭರವಸೆ.
Be the first to comment