ಪ್ರತಿಭಾನ್ವಿತ ಹೊಸ ಕಲಾವಿದರಿಗೆ ಧ್ವನಿಯಾಗಲು ನನ್ನ ಡಾಲಿ ಪಿಕ್ಚರ್ಸ್ ನಿರ್ಮಾಣ ಖುಷಿ ತಂದಿದೆ ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ಮೈಸೂರು ಜೆಕೆ ಮೈದಾನದಲ್ಲಿ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ 4 ನೇ ವರ್ಷದ ಮೈಸೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಸಿನಿ ಸಂತೆ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಹೊಸ ಮುಖದ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದರೂ ಸೂಕ್ತ ವೇದಿಕೆ ಸಿಕ್ಕಿರುವುದಿಲ್ಲ. ಹೊಸ ಪ್ರಯೋಗಗಳು, ನಿರ್ದೇಶನ, ಸಂಗೀತ ಸಾಹಿತ್ಯ ಇವೆಲ್ಲವುದಕ್ಕೂ ಮನ್ನಣೆ ನೀಡಲು ಸಿನಿ ಸಂತೆ ತರಹದ ವಸ್ತುಪ್ರದರ್ಶನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆ ಉತ್ತಮ ಬೆಳವಣಿಗೆ. ಕಲಾವಿದರಾಗಿ ನಾವು ಬೆಳೆಯುವ ಜೊತೆಗೆ ಹೊಸ ಕಲಾವಿದರನ್ನು ಕರೆ ತಂದು, ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಿದರೆ ಕಲಾವಿದನಲ್ಲಿರುವ ಕಲೆ ಸಾರ್ಥಕವಾಗುತ್ತದೆ ಎಂದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಮೈಸೂರು ಕಲಾವಿದರ ತವರೂರು. ನಾಟಕ, ನೃತ್ಯ, ಗಾಯನ, ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಮೈಸೂರಿನ ಸಾಂಸ್ಕೃತಿಕ ಹಿರಿಮೆಯನ್ನ ಶ್ರೀಮಂತಗೊಳಿಸಿದ್ದಾರೆ. ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಮುಂದಿನ ದಿನದಲ್ಲಿ ಕಲಾಸಕ್ತರಿಗಾಗಿ ಬೇಸಿಗೆ ಶಿಬಿರ ಆಯೋಜಿಸಿ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವ ಚಿಂತನೆಯಿದೆ ಎಂದರು.
ಮೈಸೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಆಯೋಜಕರಾದ ರಂಜಿತ ಸುಬ್ರಹ್ಮಣ್ಯ, ಸಂಧ್ಯಾ ರಾಣಿ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ರೇಖಾ ಶ್ರೀನಿವಾಸ್, ನಿರೂಪಕರಾದ ಅಜಯ್ ಶಾಸ್ತ್ರಿ, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್,ವನಮಾಲ, ಎಂ ಎನ್ ಚೇತನ್ ಗೌಡ, ಮೋಹನ್, ಶ್ರೀನಾಥ್ ಇನ್ನಿತರರು ಹಾಜರಿದ್ದರು.
Be the first to comment