ಬಜಾರ್
ನಿರ್ದೇಶನ: ಸುನಿ, ನಿರ್ಮಾಣ: ತಿಮ್ಮೇಗೌಡ, ಸಂಗೀತ: ರವಿ ಬಸ್ರೂರು, ಛಾಯಾಗ್ರಹಣ: ಸಂತೋಷ್ ರೈ ಪಾತಾಜೆ, ತಾರಾಬಳಗ: ಧನವೀರ್, ಅದಿತಿ, ಶರತ್ ಲೋಹಿತಾಶ್ವ, ಸಾಧು ಕೋಕಿಲ ಮತ್ತಿತರರು.
————-
ಪಾರಿವಾಳ, ಮಚ್ಚು ಮತ್ತು ಕಿಚ್ಚು
ಸುನಿ ತಮ್ಮದೇ ಒಂದು ನಿರ್ದಿಷ್ಟ ನಿರೂಪಣಾ ಶೈಲಿಯಿಂದ ಗುರುತಿಸಿಕೊಂಡ ನಿರ್ದೇಶಕ. ಮಧ್ಯಮವರ್ಗದ ಪ್ರೇಮಿಗಳ ತಾಕಲಾಟವನ್ನು ತೆಳು ಹಾಸ್ಯ, ತುಂಟತನದಿಂದ ಹೇಳುವುದು ಅವರ ಧಾಟಿ. ಆದರೆ ‘ಬಜಾರ್’ನಲ್ಲಿ ಅವರು ತಮ್ಮ ಫಾರ್ಮುಲಾ ಬಿಟ್ಟು ಹೊಸತನಕ್ಕೆ ಮುಖಾಮುಖಿಯಾಗಿದ್ದಾರೆ. ಪಾರಿವಾಳ ಬೆಟ್ಟಿಂಗ್‍ನಂತಹ ಸೆಲ್ಯುಲಾಯ್ಡ್‍ಗೆ ಹೊಸತಾದ ವಸ್ತುವಿನ ಹಿನ್ನೆಲೆಯಲ್ಲಿ ಪ್ರೇಮಕತೆಯನ್ನು ನಿರೂಪಿಸುವ ಹಾದಿಯಲ್ಲಿ ಅವರ ಭಾಗಶಃ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.
ನಿರ್ದೇಶಕ ಸುನಿಗೆ ಪಾರಿವಾಳದ ಬೆಟ್ಟಿಂಗ್ ಮತ್ತು ಬೆಟ್ಟಿಂಗ್ ನಡೆಸುವ ಶೋಕ್‍ದಾರ್‍ಗಳ ಕುರಿತು ಹೇಳುವ ಹುಮ್ಮಸ್ಸು. ಇದು ಕನ್ನಡದ ಬೆಳ್ಳಿತೆರೆಗೆ ಹೊಸ ವಿಷಯವಂತೂ ಹೌದು. ಆದರೆ ಇದನ್ನವರು ಆಕರ್ಷಕವಾಗಿ ತೆರೆಗೆ ಅಳವಡಿಸುವಲ್ಲಿ ಕೊಂಚ ಎಡವಿದ್ದಾರೆ. ಅಬ್ಬರ, ಹೊಡೆದಾಟದ ಮಧ್ಯೆ ಬೆಟ್ಟಿಂಗ್ ಕತೆಯ ಹೆಣಿಗೆ ಸಮರ್ಪಕವಾಗಿಲ್ಲ. ನಾಯಕ-ನಾಯಕಿ ಪ್ರೀತಿಗೆ ಪಾರಿವಾಳದ ನಂಟು ಬೆಸೆಯಲು ಯತ್ನಿಸುವ ಅವರ ಪ್ರಯತ್ನ, ಭರಪೂರ ಆಕ್ಷನ್ ಸನ್ನಿವೇಶಗಳು ಸೇರಿದಂತೆ ಕೆಲವು ಅಂಶಗಳು ಚಿತ್ರವನ್ನು ಕಾಪಾಡುತ್ತವೆ.
ಚಿತ್ರದ ಮೊದಲರ್ಧದಲ್ಲಿ ನಾಯಕ-ನಾಯಕಿಯ ಪರಿಚಯ, ಪಾರಿವಾಳ ಬೆಟ್ಟಿಂಗ್ ಕುರಿತ ಮಾಹಿತಿ ಸಿಗುತ್ತದೆ. ಅದೇಕೋ ಸಾಧು ಕೋಕಿಲ ಕಾಮಿಡಿ ಸರಿಯಾಗಿ ವರ್ಕ್ ಆಗಿಲ್ಲ. ಹಾಗಾಗಿ ಅಬ್ಬರದ ಮಧ್ಯೆ ಹಾಸ್ಯದ ರಿಲೀಫ್ ಕಾಣಿಸದು. ಇನ್ನು ನಾಯಕನಟ ಧನವೀರ್ ತಮ್ಮ ಎತ್ತರದ ನಿಲುವು, ಸದೃಢ ಮೈಕಟ್ಟಿನಿಂದ ಗಮನ ಸೆಳೆಯುತ್ತಾರೆ. ಆಕ್ಷನ್ ದೃಶ್ಯಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಅವರು ಭಾವನಾತ್ಮಕ ಸೀನ್‍ಗಳಲ್ಲಿ ಪಳಗಬೇಕಿದೆ. ನಾಯಕಿ ಅದಿತಿ ಪ್ರಭುದೇವ ಅಚ್ಚುಕಟ್ಟಾದ ನಟನೆಯಿಂದ ಇಷ್ಟವಾಗುತ್ತಾರೆ. ನಟ ಶರತ್ ಲೋಹಿತಾಶ್ವ ಅವರದ್ದು ತೂಕದ ಅಭಿನಯ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ರವಿ ಬಸ್ರೂರು ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
Be the first to comment