ಡೆಡ್ಲಿ ಸೋಮ, ಗಂಡ ಹೆಂಡತಿ, ಮಾದೇಶ.. ಹೀಗೆ ಸಾಕಷ್ಟು ಸೂಪರ್ ಡೂಪರ್ ಹಿಟ್ ಚಿತ್ರಗಳ ನಿರ್ದೇಶಕರಾದ ರವಿ ಶ್ರೀವತ್ಸ ಸಣ್ಣ ಗ್ಯಾಪ್‌ನ ನಂತರ ಉತ್ತರ ಕರ್ನಾಟಕದ ‘ಡೆಡ್ಲಿ ಗ್ಯಾಂಗ್’ ಜೊತೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಈ ಹಿಂದೆ ಬೆಂಗಳೂರು ಭೂಗತಲೋಕದ ಕುರಿತಾದ ಚಿತ್ರಗಳನ್ನು ಮಾಡುತ್ತಿದ್ದ ರವಿ ಶ್ರೀವತ್ಸ, ಈ ಬಾರಿ ಉತ್ತರ ಕರ್ನಾಟಕದ ಭೂಗತ ಕಥೆಯನ್ನು ‘ಗ್ಯಾಂಗ್ಸ್ ಆಫ್ ಯು.ಕೆ’ ಚಿತ್ರದ ಮೂಲಕ ತರೆದಿಡಲಿದ್ದಾರೆ. ಈ ಬಾರಿ ಅವರು ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜೊತೆಗೆ, ಡೆಡ್ಲಿ ಆರ್ಟ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಹಿರಿಯ ನಿರ್ದೇಶಕ ಎಂ.ಎಸ್.ರಮೇಶ್, ರವಿಯವರ ಬೆನ್ನಿಗೆ ನಿಂತಿದ್ದಾರೆ.
ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ನಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಕಥೆ ಮಾಡಲಾಗಿದೆ. ‘ಒಂದು ಹತ್ಯೆಯಾದಾಗ, ರಕ್ತ ತನ್ನ ಕಲೆಯನ್ನು ಬಿಟ್ಟು ಹೋಗುತ್ತದೆ. ಜಿದ್ದು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಹೋಗುತ್ತದೆ’ ಎಂಬಂದು ಚಿತ್ರದ ಪ್ರಮುಖ ಅಂಶ. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್ ಲೈನ್ ಚಿತ್ರಕ್ಕಿದೆ. ಸನ್ನಿವೇಶಗಳಿಗೆ ತಕ್ಕ ಹಾಗೆ ಸಂತ ಶಿಶುನಾಳ ಷರೀಫರ ಎಂಟು ಗೀತೆಗಳನ್ನು ಬಳಸಿಕೊಳ್ಳಲಾಗಿದ್ದು, ಸಾಧು ಕೋಕಿಲ ಅವರ ಸಂಗೀತ ಚಿತ್ರಕ್ಕಿದೆ.
ಚಿತ್ರದಲ್ಲಿ ಒಟ್ಟು 56 ಕಲಾವಿದರಲ್ಲಿ ಬಹುತೇಕ ಹೊಸಬರೇ ಇದ್ದಾರೆ. ‘ಒರಟ’ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಹೀಗೆ ಹೊಸಬರ ಜೊತೆ ಪ್ರತಿಭಾವಂತ ಕಲಾವಿದರೂ ಚಿತ್ರದಲ್ಲಿದ್ದಾರೆ. ಕೆವಿ. ರಾಜು ಅವರ ಪುತ್ರ ಅಮೋಘ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋನು ಉಪಾಧ್ಯ, ಪ್ರವೀಣ್, ‘ಉಗ್ರಂ’ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್ ಕೃಷ್ಣ ಪುತ್ತೂರು, ಪ್ರಜ್ವಲ್ ಮಸ್ಕಿ, ಉಮೇಶ್ ಸಕ್ಕರೆನಾಡು, ವಿಕಾಸ್ ಹೀಗೆ ಸಾಕಷ್ಟು ನವ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಪತ್ರಕರ್ತ ನವೀನ್ ಕೃಷ್ಣ ಪುತ್ತೂರು, ಬಂಗಾರಪ್ಪ ಭೋಸರಾಜ ಹೆಸರಿನ ಉಸ್ತುವಾರಿ ಸಚಿವನ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇವರು ಬೆಂಗಳೂರಿನ ಪ್ರಮುಖ ಹವ್ಯಾಸಿ ರಂಗ ತಂಡಗಳಲ್ಲಿ ರಂಗದ ಹಿಂದೆ ಮತ್ತು ನಟರಾಗಿ ಗುರುತಿಸಿಕೊಂಡಿದ್ದು, ‘ರಂಗಮುಖೇನ ಶಿಕ್ಷಣ’ ಅಭಿಯಾನದಲ್ಲಿ ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಪ್ರಮುಖ ನಟನಾಗಿ ನಟಿಸಿದ್ದು ಇವರ ಹೆಗ್ಗಳಿಕೆ. ಕಿರುತೆರೆ, ಹಿರಿತೆರೆ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ನವೀನ್ ಕೃಷ್ಣ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಶ್ರೀ ಸಂಚಾರಿ ವಿಜಯ್ ಅವರಿಗೆ ‘ಮೆಲೊಬ್ಬ ಮಾಯಾವಿ’ ಎಂಬ ಚಿತ್ರ ನಿರ್ದೇಶಿಸಿ ಸೈ ಅನ್ನಿಸಿಕೊಂಡು, ಪ್ರಸ್ತುತ ನಟನೆಯ ಜೊತೆ ಜೊತೆಗೆ ಸಿನಿಮಾ ನಿರ್ದೇಶನದ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.
Be the first to comment