‘ಹಲಗಲಿ’ ನಾಯಕಿ ಸಪ್ತಮಿ ಗೌಡ

ಕಾಂತಾರ ಚೆಲುವೆ ಸಪ್ತಮಿ ಗೌಡ, ‘ಹಲಗಲಿ’ ಚಿತ್ರದಲ್ಲಿ ಡಾಲಿ  ಧನಂಜಯಗೆ  ಜೋಡಿಯಾಗಲಿದ್ದಾರೆ.

‘ಪಾಪ್‌ಕಾರ್ನ್‌ ಮಂಕಿ ಟೈಗರ್‌’ ಚಿತ್ರದಲ್ಲಿ ಸಪ್ತಮಿ ಗೌಡ, ಧನಂಜಯ್‌ ಜೊತೆ ನಟಿಸಿದ್ದರು.  ಎರಡನೇ ಬಾರಿಗೆ ಇವರಿಬ್ಬರೂ ‘ಹಲಗಲಿ’ ಚಿತ್ರದಲ್ಲಿ ಜೋಡಿಯಾಗಲಿದ್ದಾರೆ.

‘ಹಲಗಲಿ’ ಸಿನಿಮಾ ಪ್ರೀ ಪ್ರೊಡಕ್ಷನ್‌  ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ  ಮುಹೂರ್ತ ನಂತರ ಚಿತ್ರತಂಡ ಶೂಟಿಂಗ್‌ ಆರಂಭಿಸಲಿದೆ.

‘ಹಲಗಲಿ’ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಐತಿಹಾಸಿಕ ಚಿತ್ರವಾದ್ದರಿಂದ  ಸುಮಾರು  100 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.   ಸಿನಿಮಾ 2 ಭಾಗಗಳಲ್ಲಿ ತಯಾರಾಗಲಿದೆ. ಉದ್ಯಮಿ ಕಲ್ಯಾಣ್‌ ಚಕ್ರವರ್ತಿ ಧೂಳಿಪಾಲ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಸುಕೇಶ್‌ ಡಿ ನಿರ್ದೇಶನ ಮಾಡುತ್ತಿದ್ದಾರೆ.  ಕನ್ನಡ ಭಾಷೆ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.

ಇದು ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಮಾಡಿದ ಬಾಗಲಕೋಟೆ ಜಿಲ್ಲೆಯ ಹಲಗಲಿ ಗ್ರಾಮದ ಜನರ ಕುರಿತಾದ ಸಿನಿಮಾ. 1857 ಸ್ವಾತಂತ್ಯ್ರ ಸಂಗ್ರಾಮದ ನಂತರ ಬ್ರಿಟಿಷ್‌ ಸರ್ಕಾರ ಸಾರ್ವಜನಿಕರು ಶಸ್ತ್ರಗಳನ್ನು ಬಳಸದಂತೆ ನಿಯಮ ಜಾರಿಗೊಳಿಸಿ,  ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮುಂದಾಗಿತ್ತು.

ಹಲಗಲಿ ಗ್ರಾಮದ ಜನರು ಬ್ರಿಟಿಷರ ಈ ನೀತಿಯನ್ನು ವಿರೋಧಿಸಿದರು. ಆಗ ಹಲಗಲಿ  ಹಾಗೂ ಬ್ರಿಟಿಷರ ನಡುವೆ ಯುದ್ಧ ನಡೆಯಿತು. ಇದರಲ್ಲಿ ಸಹಾಯಕ ಮ್ಯಾಜಿಸ್ಟ್ರೇಟ್‌ ವಿಲಿಯಮ್‌ ಹೆನ್ರಿ ಸಾವನ್ನಪ್ಪುತ್ತಾನೆ.  ಕೋಪಗೊಂಡ ಬ್ರಿಟಿಷ್‌ ಸರ್ಕಾರ ರಾತ್ರಿ ಗುಂಡಿನ ದಾಳಿ ನಡೆಸಿ, ಮನೆಗಳಿಗೆ ಬೆಂಕಿ ಹಚ್ಚಿದರು. ಇದರಿಂದ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡರು. ಇದೇ ಕಥೆ  ತೆರೆ ಮೇಲೆ ಸಿನಿಮಾವಾಗಿ ಬರಲಿದೆ.

ಹಲಗಲಿ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ,  ರಾಷ್ಟ್ರಪ್ರಶಸ್ತಿ ವಿಜೇತ ಆಕ್ಷನ್‌ ಕೊರಿಯೋಗ್ರಾಫರ್‌ ವಿಕ್ರಮ್‌ ಮೋರ್‌  ಫೈಟ್‌ ಕೊರಿಯೋಗ್ರಫಿ ಮಾಡಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!