ಬಾಲಿವುಡ್ನ ನಟ ನವಾಜುದ್ಧೀನ್ ಸಿದ್ಧಿಕಿ ವಿರುದ್ಧ ಮುಂಬೈ ಪೊಲೀಸರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಸದಸ್ಯರು ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನವಾಜುದ್ಧೀನ್ ಸಿದ್ಧಿಕಿ ಜಾಹೀರಾತೊಂದರಲ್ಲಿ ನಟಿಸಿದ್ದು, ಈ ಜಾಹೀರಾತು ಹಿಂದೂಪರ ಸಂಘಟನೆಯ ಅಸಮಾಧಾನಕ್ಕೆ ಕಾರಣವಾಗಿದೆ. ಸಿದ್ಧಿಕಿ ‘ಬಿಗ್ ಕ್ಯಾಶ್’ ಹೆಸರಿನ ಗೇಮಿಂಗ್ ಅಪ್ಲಿಕೇಶನ್ ರಾಯಭಾರಿ ಆಗಿದ್ದು, ಈ ಗೇಮಿಂಗ್ ಅಪ್ಲಿಕೇಶನ್ನ ಜಾಹೀರಾತುಗಳಲ್ಲಿ ನವಾಜುದ್ಧೀನ್ ಸಿದ್ಧಿಕಿ ನಟಿಸಿದ್ದಾರೆ. ಬಿಗ್ ಕ್ಯಾಶ್ ಅಪ್ಲಿಕೇಶನ್ ನಲ್ಲಿ ಹಣ ತೊಡಗಿಸಿ ರಮ್ಮಿ ಸೇರಿದಂತೆ ಇನ್ನೂ ಕೆಲವು ಆಟಗಳನ್ನು ಆಡಬಹುದಾಗಿದೆ.
ಅಪ್ಲಿಕೇಶನ್ನ ಹೊಸ ಜಾಹೀರಾತಿನಲ್ಲಿ ನವಾಜುದ್ಧೀನ್ ಸಿದ್ಧಿಕಿ ಪೊಲೀಸ್ ಸಮವಸ್ತ್ರ ಧರಿಸಿ, ‘ಕ್ರೈಂ ವಿಭಾಗದಲ್ಲಿ ದೊಡ್ಡ ಹೆಸರು ಮಾಡಬೇಕೆಂದರೆ ದೊಡ್ಡ ಕೆಲಸ ಮಾಡಬೇಕಾಗುತ್ತದೆ. ಈ ಅಪರಾಧಿಗಳು ನನ್ನನ್ನು ಸಾಮಾನ್ಯ ಅಂದುಕೊಂಡು ಬಿಟ್ಟಿದ್ದಾರೆ. ಅವರ ಹಾವ ಭಾವದಿಂದಲೇ ಅವರ ಆಟ ಎಂಥದ್ದುಎಂದು ನಾನು ಕಂಡು ಹಿಡಿದುಬಿಡುತ್ತೇನೆ. ಈ ಆಟವನ್ನು ನಾನು ಐದು ಕೋಟಿ ಜನರೊಟ್ಟಿಗೆ ಪ್ರತಿ ದಿನವೂ ಆಡುತ್ತೇನೆ. ಬಿಗ್ ಕ್ಯಾಶ್ನಲ್ಲಿ ನೀವೂ ಆಟವಾಡಿ ಹಣ ಗಳಿಸಿ’ ಎಂದು ಹೇಳುತ್ತಾರೆ.
ಜಾಹೀರಾತಿನಲ್ಲಿ ನವಾಜುದ್ಧೀನ್ ಸಿದ್ಧಿಕಿ ಮುಂಬೈ ಪೊಲೀಸರ ಸಮವಸ್ತ್ರ ಧರಿಸಿದ್ದಾರೆ. ಈ ಜಾಹೀರಾತು ಮುಂಬೈ ಪೊಲೀಸರ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
1990 ರಿಂದ ಸಿನಿಮಾಗಳಲ್ಲಿ ನಟಿಸುತ್ತಿರುವ ನವಾಜುದ್ಧೀನ್ ಸಿದ್ಧಿಕಿ, ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಈಗ ಬಾಲಿವುಡ್ನ ಬೇಡಿಕೆಯ ನಟರಾಗಿದ್ದಾರೆ.
Be the first to comment