ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ತುಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಈ ಹಿಂದೆ ಗಣೇಶ್ ನಟನೆಯ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಶಿಲ್ಪಾ ಗಣೇಶ್ ಮೊದಲ ಬಾರಿಗೆ ತುಳು ಸಿನಿಮಾಣಕ್ಕೆ ಕೈ ಹಾಕಿದ್ದಾರೆ. ಕರಾವಳಿ ಮೂಲದವರಾದ ಶಿಲ್ಪಾ ಗಣೇಶ್ ತವರಿನಲ್ಲಿ ಉತ್ತಮ ಬಜೆಟ್ನಲ್ಲಿ ಗುಣಮಟ್ಟದ ಸಿನಿಮಾ ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಸಿನಿಮಾವನ್ನು ಸಂದೀಪ್ ಬೆದ್ರ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಮೋಹನ್ ಭಟ್ಕಳ್ ಬರೆದಿದ್ದಾರೆ. ಜನಪ್ರಿಯ ಕ್ಯಾಮೆರಾಮನ್ ಸಂತೋಶ್ ರೈ ಪತಾಜೆ ಅವರು ಸಿನಿಮಾಕ್ಕೆ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಸಿನಿಮಾದ ನಾಯಕನಾಗಿ ಕರಾವಳಿ ಭಾಗದ ಮುಖಂಡ ಹರಿಕೃಷ್ಣ ಬಂಟ್ವಾಳ ಅವರ ಪುತ್ರ ನಿತ್ಯ ಪ್ರಕಾಶ್ ಬಂಟ್ವಾಳ ನಟಿಸಲಿದ್ದಾರೆ. ನಾಯಕಿಯಾಗಿ ಹೊಸ ಮುಖವನ್ನು ಪರಿಚಯ ಮಾಡುವ ಸಾಧ್ಯತೆ ಇದೆ.
ಶಿಲ್ಪಾ ಗಣೇಶ್ ಸಿನಿಮಾದ ಕತೆ, ಚಿತ್ರಕತೆ, ತಂತ್ರಜ್ಞರು ಅಂತಿಮವಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ. ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯೂ ಇದೆ.
”ಸಿನಿಮಾ ಕೌಟುಂಬಿಕ ಕತೆಯನ್ನು ಒಳಗೊಂಡಿದ್ದು, ಹಾಸ್ಯ ಪ್ರಧಾನ ಆಗಿರಲಿದೆ. ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಚಿತ್ರದ ಹಾಡುಗಳನ್ನು ಕೆಲವು ಬೇರೆ ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಇದೆ” ಎಂದು ನಿರ್ದೇಶಕ ಸಂದೀಪ್ ಬೆದ್ರ ಹೇಳಿದ್ದಾರೆ.
Be the first to comment