ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಭಾರತದ ಸೈಬರ್ ಸೆಕ್ಯುರಿಟಿ ರಾಯಭಾರಿ ಆಗಿ ಆಯ್ಕೆ ಆಗಿದ್ದಾರೆ.
ಕೇಂದ್ರ ಗೃಹ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ ರಶ್ಮಿಕಾ ಮಂದಣ್ಣರನ್ನು ಭಾರತೀಯ ಸೈಬರ್ ಸುರಕ್ಷಾ ಕಾರ್ಯಕ್ರಮದ ರಾಯಭಾರಿಯಾಗಿ ನೇಮಕ ಮಾಡಿದೆ. ರಶ್ಮಿಕಾ ಮಂದಣ್ಣ ಇನ್ನು ಮುಂದೆ ಸೈಬರ್ ಕ್ರೈಂ, ಡೀಪ್ ಫೇಕ್ ವಿಡಿಯೋ, ಆನ್ಲೈನ್ ಫ್ರಾಡ್ ಇನ್ನಿತರ ಸೈಬರ್ ಸಂಬಂಧಿ ಅಪರಾಧಗಳ ಕುರಿತಾಗಿ ಸಾಕ್ಷರತೆ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ‘ಸೈಬರ್ ಅಪರಾಧವು ವ್ಯಾಪಕವಾದ ಸಮಸ್ಯೆಯಾಗಿದೆ. ಅದು ಪ್ರಪಂಚದಾದ್ಯಂತ ಇರುವ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಸೈಬರ್ ಬೆದರಿಕೆಗಳನ್ನು ಎದುರಿಸಲು ನಮ್ಮ ಡಿಜಿಟಲ್ ಸ್ಥಳಗಳನ್ನು ರಕ್ಷಿಸಲು ನಾವು ಒಗ್ಗೂಡುವುದು ಬಹಳ ಮುಖ್ಯವಾಗಿದೆ. ಸೈಬರ್ ಸಮಸ್ಯೆಯನ್ನು ಅನುಭವಿಸಿರುವ ವ್ಯಕ್ತಿಯಾಗಿ ಈ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಧನಾತ್ಮಕ ಬದಲಾವಣೆಯನ್ನು ತರಲು ಸೈಬರ್ ಸುರಕ್ಷತೆಯ ಸಂದೇಶವನ್ನು ಪ್ರಚಾರ ಮಾಡಲು ಉತ್ಸುಕಗಳಾಗಿದ್ದೇನೆ. ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದೇನೆ’ ಎಂದಿದ್ದಾರೆ.
ಕಳೆದ ವರ್ಷ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಯಾವುದೋ ಯುವತಿಯ ಅರೆಬೆತ್ತಲೆ ವಿಡಿಯೋಕ್ಕೆ ರಶ್ಮಿಕಾ ಮಂದಣ್ಣರ ಮುಖವನ್ನು ಜೋಡಿಸಲಾಗಿತ್ತು. ವಿಡಿಯೋ ನೋಡಿದವರು ಇದು ರಶ್ಮಿಕಾರದ್ದೇ ವಿಡಿಯೋ ಎನ್ನುವಂತಿತ್ತು.
ವಿಡಿಯೋ ವೈರಲ್ ಆದ ಬಳಿಕ ಅಮಿತಾಬ್ ಬಚ್ಚನ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವರು ವಿಡಿಯೋವನ್ನು ವಿರೋಧಿಸಿ ರಶ್ಮಿಕಾಗೆ ಬೆಂಬಲ ಸೂಚಿಸಿದ್ದರು. ಡೀಪ್ ಫೇಕ್ ವಿಡಿಯೋಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು.
Be the first to comment