ಸೂಪರ್ ಸ್ಟಾರ್ ರಜನೀಕಾಂತ್ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ದೂರು ದಾಖಲಾಗಿದೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ರಜನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಈ ಬೆನ್ನಲ್ಲೇ ರಜನಿಕಾಂತ್ ಹೊಸ ಸಿನಿಮಾ ‘ವೆಟ್ಟೆಯಾನ್’ ವಿರುದ್ಧ ದೂರು ದಾಖಲಾಗಿದೆ.
‘ವೆಟ್ಟೆಯಾನ್’ ಸಿನಿಮಾದ ಟ್ರೈಲರ್ನಲ್ಲಿ ಕೇಳಿ ಬರುವ ಕೆಲ ಸಂಭಾಷಣೆಗಳ ವಿರುದ್ಧ ವಕೀಲ ಪಲನಿವೇಲುಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡಿದ್ದಾರೆ. ಟ್ರೈಲರ್ ನಲ್ಲಿ ಬಳಸಲಾಗಿರುವ ಕೆಲವು ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಲನಿವೇಲುಸ್ವಾಮಿ ಎಂಬುವರು ಹೈಕೋರ್ಟ್ನ ಮಧುರೈ ಬೆಂಚ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಸಿನಿಮಾದ ಟ್ರೈಲರ್ನಲ್ಲಿ ನಾಯಕ ಎನ್ಕೌಂಟರ್ ಕುರಿತಾಗಿ ಹೀರೋಯಿಕ್ ಸಂಭಾಷಣೆಗಳನ್ನು ಹೇಳುವ ದೃಶ್ಯಗಳಿವೆ. ಈ ದೃಶ್ಯಗಳು ಹಾಗೂ ಸಂಭಾಷಣೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ವೆಟ್ಟೆಯಾನ್’ ಸಿನಿಮಾದಲ್ಲಿ ಅಕ್ರಮ ಚಟುವಟಿಕೆಯಾದ ಎನ್ಕೌಂಟರ್ಗೆ ಒತ್ತು ನೀಡುವ, ಎನ್ಕೌಂಟರ್ ನ್ನು ಸರಿಯೆಂದು ವಾದಿಸುವ ಸಂಭಾಷಣೆಗಳಿವೆ. ಇದು ಸಮಾಜಕ್ಕೆ ಮಾರಕವಾಗಿದೆ. ಈ ಸಿನಿಮಾ ಬಿಡುಗಡೆ ಆದರೆ ಜನರ ಮನಸ್ಸಿನಲ್ಲಿ ಎನ್ಕೌಂಟರ್ಗಳು ಸರಿಯೆಂಬ ಭಾವನೆ ಮೂಡಲಿದೆ. ಈ ಸಿನಿಮಾದಲ್ಲಿರುವ ಎನ್ಕೌಂಟರ್ ಕುರಿತಾದ ಸಂಭಾಷಣೆಗಳನ್ನು ಮ್ಯೂಟ್ ಮಾಡುವಂತೆ ನಿರ್ಮಾಣ ಸಂಸ್ಥೆಗೆ ಸೂಚಿಸಬೇಕು. ಇಲ್ಲವಾದರೆ ಸಿನಿಮಾದ ಬಿಡುಗಡೆಗೆ ತಾತ್ಕಾಲಿಕ ತಡೆ ನೀಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ಸಿಬಿಎಫ್ಸಿ ಹಾಗೂ ಸಿನಿಮಾ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ ಹೌಸ್ಗೆ ನೊಟೀಸ್ ಜಾರಿ ಮಾಡಿದೆ. ಆದರೆ ಸಿನಿಮಾದ ಬಿಡುಗಡೆ ಮೇಲೆ ತಾತ್ಕಾಲಿಕ ತಡೆ ನೀಡಲು ಪೀಠವು ನಿರಾಕರಿಸಿದೆ.
ಸಿಬಿಎಫ್ಸಿ ಹಾಗೂ ಲೈಕಾ ಪ್ರೊಡಕ್ಷನ್ ಹೌಸ್ನ ಪ್ರತಿಕ್ರಿಯೆ ಬಳಿಕ ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.
Be the first to comment