ಕರ್ಕಿ ಸಿನಿಮಾದ ಪ್ರಚಾರ ಕಾರ್ಯ ಆರಂಭ ಆಗಿದ್ದು ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಆಡಿಯೋವನ್ನು ಬಿಡುಗಡೆ ಮಾಡಿದೆ.
ಸಂಗೀತ ನಿರ್ದೇಶಕ ಮತ್ತು ಸಾಹಿತಿ ಕೆ. ಕಲ್ಯಾಣ್, ಚಿತ್ರ ಸಾಹಿತಿ ಕವಿರಾಜ್, ನಟಿ ಸಾತ್ವಿಕಾ, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ಬಾ. ಮ. ಹರೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮತ್ತು ಚಿತ್ರತಂಡದ ಸದಸ್ಯರು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕರ್ಕಿಯ ಹಾಡುಗಳನ್ನು ಬಿಡುಗಡೆ ಮಾಡಿದರು.
ತಮಿಳಿನಲ್ಲಿ ‘ಸೂರ್ಯನ್’, ಐ ಲವ್ ಇಂಡಿಯಾ, ಇಂದು ಕಲ್ಲೂರಿ ವಾಸಲ್ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತ ನಿರ್ದೇಶಕ ಪವಿತ್ರನ್ ‘ಕರ್ಕಿ’ ಸಿನಿಮಾ ಮುಗಿಸಿದ್ದಾರೆ. ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಿಸಿರುವ ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ, ‘ಕರ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡುವ ಅವರು, ‘ಸಿನೆಮಾದ ಕಥೆ ಇಷ್ಟವಾಗಿ ಈ ಸಿನೆಮಾವನ್ನು ನಿರ್ಮಿಸಲು ಮುಂದಾದೆ. ಈ ಸಿನೆಮಾವನ್ನು ಕನ್ನಡದ ದೊಡ್ಡ ನಿರ್ದೇಶಕರೊಬ್ಬರು ಮಾಡಬೇಕಿತ್ತು. ಕಾರಣಾಂತರಗಳಿಂದ ಅವರು ನಿರ್ದೇಶನ ಮಾಡಲಾಗಲಿಲ್ಲ. ಅವರ ಬದಲಾಗಿ ತಮಿಳು ನಿರ್ದೇಶಕ ಪವಿತ್ರನ್ ಈ ಸಿನಿಮಾವನ್ನು ನಿರ್ದೇಶಿಸಿದರು. ಅವರ ಅನುಭದಲ್ಲಿ ‘ಕರ್ಕಿ’ ಸಿನೆಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಸಿನೆಮಾದ ಎಲ್ಲಾ ಕೆಲಸಗಳು ಮುಗಿದಿದ್ದು, ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎಂದರು.
‘ವಾಟ್ಸಾಪ್ ಲವ್’, ‘ರಾಜರಾಣಿ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಜಯಪ್ರಕಾಶ್ (ಜೆ.ಪಿ) ರೆಡ್ಡಿ ‘ಕರ್ಕಿ’ ಚಿತ್ರದ ನಾಯಕ. ಕಾನೂನು ಪದವಿಧರನಾಗಬೇಕು ಎಂಬ ಕನಸಿರುವ ಹಳ್ಳಿ ಹುಡುಗನ ಪಾತ್ರದಲ್ಲಿ ಜೆಪಿ ಅಭಿನಯಿಸಿದ್ದಾರೆ.
ಜಯಪ್ರಕಾಶ್ (ಜೆ.ಪಿ) ರೆಡ್ಡಿ ಮಾತನಾಡಿ, ಈ ಚಿತ್ರದಲ್ಲಿ ನನ್ನದು ಮುತ್ತುರಾಜ್ ಎಂಬ ಹಳ್ಳಿ ಹುಡುಗನ ಪಾತ್ರ. ಜಾತಿ ಮತ್ತು ಜನಾಂಗೀಯ ವಿಷಯವನ್ನು ಮನ ಮುಟ್ಟುವಂತೆ ಇಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಪ್ರೇಮ ಮತ್ತು ಮಾನವೀಯತೆಯ ಅಂಶಗಳ ಸುತ್ತ ಚಿತ್ರ ಸಾಗುತ್ತದೆ. ನೈಜವಾಗಿ ಸಿನೆಮಾದ ಕಥೆ, ಪಾತ್ರಗಳು ಮೂಡಿಬಂದಿದೆ’ ಎಂದರು.
‘ಕರ್ಕಿ’ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಆರು ಹಾಡುಗಳಿದ್ದು, ಈ ಎಲ್ಲಾ ಹಾಡುಗಳಿಗೆ ಸಾಹಿತ್ಯ ರಚಿಸಿದವರು ಚಿತ್ರ ಸಾಹಿತಿ ಕವಿರಾಜ್.
ಇದು ಕನ್ನಡ ಚಿತ್ರ ಪ್ರೇಕ್ಷಕರಿಗೆ ಖಂಡಿತವಾಗಿಯೂ ಮನಮುಟ್ಟುವ ಸಿನಿಮಾವಾಗಲಿದೆ. ನಮ್ಮ ನಡುವೆಯೇ ನಡೆಯುವ ನೈಜ ಕಥೆಯನ್ನು ಈ ಸಿನಿಮಾದಲ್ಲಿ ತೆರೆಮೇಲೆ ತಂದಿದ್ದೇವೆ. ಇಲ್ಲಿ ಯಾವುದನ್ನೂ ವೈಭವೀಕರಿಸದೆ, ನೈಜವಾಗಿ ಎಲ್ಲವನ್ನೂ ಪ್ರೇಕ್ಷಕರ ಮುಂದಿಡುವ ಕೆಲಸ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ’ ಎಂದು ನಿರ್ದೇಶಕ ಪವಿತ್ರನ್ ಹೇಳಿದ್ದಾರೆ.
ಸೆಪ್ಟೆಂಬರ್ ಅಂತ್ಯದೊಳಗೆ ಕರ್ಕಿ ಸಿನಿಮಾ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. ‘ಕರ್ಕಿ’ ಸಿನಿಮಾ ಹಿಂದಿಯಲ್ಲಿ ‘ಧಡಕ್ 2’ ಎಂಬ ಹೆಸರಿನಲ್ಲಿ ತೆರೆಗೆ ಬರುತ್ತಿದ್ದು, ಈ ಸಿನಿಮಾವನ್ನು ಕರಣ್ ಜೋಹಾರ್ ನಿರ್ಮಿಸಿ, ಬಾಲಿವುಡ್ ನಲ್ಲಿ ತೆರೆಗೆ ತರುತ್ತಿದ್ದಾರೆ. ಆ ಸಿನಿಮಾ ನವೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ.
‘ಕರ್ಕಿ’ ಸಿನೆಮಾದಲ್ಲಿ ನಾಯಕಿಯಾಗಿ ಮಲೆಯಾಳಿ ಬೆಡಗಿ ಮೀನಾಕ್ಷಿ ಕಾಣಿಸಿಕೊಂಡಿದ್ದಾರೆ. ಮೀನಾಕ್ಷಿ ಅವರಿಗೆ ಇದು ಮೊದಲ ಕನ್ನಡ ಸಿನೆಮಾ. ಸಿನೆಮಾದಲ್ಲಿ ಮೀನಾಕ್ಷಿ ಅವರಿಗೆ ಶ್ರೀಮಂತ ಕುಟುಂಬದ, ಮೇಲ್ವರ್ಗದ ಹುಡುಗಿಯ ಪಾತ್ರವಿದೆ.
ಪಾತ್ರದ ಬಗ್ಗೆ ಮಾತನಾಡಿರುವ ಮೀನಾಕ್ಷಿ, ‘ನನ್ನ ಮೊದಲ ಕನ್ನಡ ಸಿನೆಮಾದಲ್ಲೇ ಒಳ್ಳೆಯ ಪಾತ್ರ ಸಿಕ್ಕಿದೆ. ನೈಜತೆಗೆ ಹತ್ತಿರವಿರುವ ಪಾತ್ರ ಇದಾಗಿದೆ. ಅಪ್ಪಟ ಕನ್ನಡದ ಹುಡುಗಿಯ ಪಾತ್ರ ಮಾಡಿರುವುದಕ್ಕೆ ಖುಷಿಯಿದೆ. ಪ್ರತಿಯೊಬ್ಬ ನೋಡುಗರಿಗೂ ನನ್ನ ಪಾತ್ರ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಸಾಧು ಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು ಅಭಿನಯಿಸಿದ್ದಾರೆ.
ಹೃಷಿಕೇಶ ಛಾಯಾಗ್ರಹಣ, ಕ್ರೇಜಿಮೈಂಡ್ಸ್ ಶ್ರೀ ಸಂಕಲನ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
Be the first to comment